ಆಕ್ಲೆಂಡ್: ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸತತ ಎರಡು ಏಕದಿನ ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯ ಸೋಲುಕಂಡ ತಂಡ ಎಂಬ ಕೆಟ್ಟ ದಾಖಲೆಗೆ ಪಾತ್ರವಾಗಿದೆ.
ಆಕ್ಲೆಂಡ್ನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್, ಜಡೇಜಾ, ನವದೀಪ್ ಸೈನಿ ಅವರ ಬ್ಯಾಟಿಂಗ್ ನಡುವೆಯೂ ಭಾರತ ತಂಡ 22 ರನ್ಗಳಿಂದ ಸೋಲು ಕಾಣುವ ಮೂಲಕ 2-0 ಅಂತದಿಂದ ಸರಣಿ ಕೈಚೆಲ್ಲಿದೆ.
ಈ ಸರಣಿ ಸೋಲಿನೊಂದಿಗೆ ಭಾರತ ಏಕದಿನ ಚರಿತ್ರೆಯಲ್ಲಿ ಆಡಿರುವ (ಅತಿ ಹೆಚ್ಚು) 986 ಪಂದ್ಯಗಳಲ್ಲಿ ಬರೋಬ್ಬರಿ 423 ಮ್ಯಾಚ್‌ಗಳಲ್ಲಿ ಸೋಲು ಕಂಡಂತಾಗಿದೆ. ಈ ಮೂಲಕ ಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಸೋತ ತಂಡ ಎಂಬ ಕೆಟ್ಟ ದಾಖಲೆಗೂ ಟೀಂ ಇಂಡಿಯಾ ಪಾತ್ರವಾಗಿದೆ. ಭಾರತವನ್ನು ಬಿಟ್ಟರೆ ಶ್ರೀಲಂಕಾ 421, ಪಾಕಿಸ್ತಾನ 413, ನ್ಯೂಜಿಲ್ಯಾಂಡ್ 374 ಪಂದ್ಯಗಳಲ್ಲಿ ಸೋತು ನಂತರದ ಸ್ಥಾನದಲ್ಲಿವೆ.
12 ಸರಣಿಗಳ ಜಯದ ಬಳಿಕ ಮೊದಲ ಸೋಲು: ಭಾರತ ತಂಡ 2019ರ ವಿಶ್ವಕಪ್ ಬಳಿಕ ಎಲ್ಲ ಮಾದರಿಯ 12 ದ್ವಿಪಕ್ಷೀಯ ಸರಣಿಗಳನ್ನಾಡಿದೆ. ಈ ವೇಳೆ 3 ಟೆಸ್ಟ್ ಸರಣಿ, 5 ಟಿ20 ಹಾಗೂ ಮೂರು ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ ಟಿ20 ಸರಣಿಯನ್ನು ಡ್ರಾ ಸಾಧಿಸಿತ್ತು. ಇದೀಗ ಕಿವೀಸ್ ವಿರುದ್ಧ ಏಕದಿನ ಸರಣಿ ಕಳೆದುಕೊಳ್ಳುವ ಮೂಲಕ ತನ್ನ ಸರಣಿ ಗೆಲುವಿನ ಸರಪಳಿ ಕಳಚಿಕೊಂಡಿದೆ.