ದುಬೈ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜೂನ್ 30ಕ್ಕೂ ಮುನ್ನ ಜರುಗಬೇಕಿದ್ದ ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂದೂಡಿದೆ.
ಜಾಗತಿಕವಾಗಿ ಕೋವಿಡ್-19ನಿಂದ 24,354 ಮಂದಿ ಸಾವನ್ನಪ್ಪಿದ್ದಾರೆ. 5,42,417 ಮಂದಿಗೆ ಸೋಂಕು ದೃಢಪಟ್ಟಿದೆ. ಸದ್ಯದ ಮಟ್ಟಿಗೆ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಎಲ್ಲಾ ದೇಶಗಳಲ್ಲಿ ಲಾಕ್ಡೌನ್ ಆದೇಶ ಜಾರಿಯಲ್ಲಿದೆ. ಹೀಗಾಗಿ ಪಂದ್ಯಗಳನ್ನ ಮುಂದೂಡಲಾಗಿದೆ.
ಆರೋಗ್ಯದ ಕಾಳಜಿಯಿಂದ ಗಮನಾರ್ಹವಾಗಿ ವಿಶ್ವದಲ್ಲಿ ಆಯಾ ದೇಶಗಳ ಸರ್ಕಾರಗಳು ವಿಧಿಸಿರುವ ಆದೇಶದಿಂದ ಜೂನ್ ಅಂತ್ಯದವರೆಗೆ ಎಲ್ಲಾ ಪಂದ್ಯಗಳನ್ನೂ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಐಸಿಸಿ ವಿಶ್ವಕಪ್ ಆಯೋಜನೆಯ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದರು.
ಆಟಗಾರರ, ಸಿಬ್ಬಂದಿ, ಅಧಿಕಾರಿಗಳ ಮತ್ತು ಅಭಿಮಾನಿಗಳ ಆರೋಗ್ಯ ಮತ್ತು ಸುರಕ್ಷತೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಎಲ್ಲರ ಒಳಿತಿಗಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲಿದ್ದೇವೆ. ಎಲ್ಲಾ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನದಿಂದಲೇ ಐಸಿಸಿ ಈ ನಿರ್ಧಾರಕ್ಕೆ ಬಂದಿದೆ ಎಂದು ಅವರು ತಿಳಿಸಿದರು.
ಐಸಿಸಿ ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯಗಳು ಶ್ರೀಲಂಕಾದಲ್ಲಿ ಜುಲೈ 3ರಿಂದ 19ರವರೆಗೂ ನಡೆಯಲಿವೆ. ಇವುಗಳ ಮೇಲೂ ನಿಗಾ ಇಡಲಾಗಿದೆ. ಪುರುಷರ ಟಿ20 ವಿಶ್ವಕಪ್ ಪಂದ್ಯಗಳು ಏಪ್ರಿಲ್ನಲ್ಲಿ ಜರುಗಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಅರ್ಹತಾ ಪಂದ್ಯಗಳು ಜೂನ್ 30ರೊಳಗೆ ಮುಕ್ತಾಯವಾಗಬೇಕಿತ್ತು.