ಮುಂಬೈ : ರಣಜಿ ಟ್ರೋಫಿಯಲ್ಲಿ 41 ಬಾರಿ ಪ್ರಶಸ್ತಿಗೆ ದಾಖಲೆ ಬರೆದಿರುವ ಬಲಿಷ್ಠ ಮುಂಬೈ ದೇಶಿ ಟಿ20 ಲೀಗ್ನಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದೆ. ಭಾನುವಾರ ಕಳೆದ ಲೀಗ್ನಲ್ಲಿ ಪ್ಲೇಟ್ ಗ್ರೂಪ್ನಿಂದ ಬಡ್ತಿ ಪಡೆದಿರುವ ಪುದುಚೇರಿ ವಿರುದ್ಧವೂ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಮುಖಭಂಗ ಅನುಭವಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇ ಗುಂಪಿನ ಪಂದ್ಯದಲ್ಲಿ ಮುಂಬೈ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ 19 ಓವರ್ಗಳಲ್ಲಿ ಕೇವಲ 94 ರನ್ಗಳಿಗೆ ಆಲೌಟ್ ಆಗಿದೆ. ಪುದುಚೇರಿ ಬೌಲಿಂಗ್ ದಾಳಿಯ ಮುಂದೆ ಆಲ್ರೌಂಡರ್ ಶಿವಂ ದುಬೆ(28) ಮಾತ್ರ 20ರ ಗಡಿದಾಟಿದರು.
ಯಶಸ್ವಿ ಜೈಸ್ವಾಲ್(15) ಆದಿತ್ಯ ತಾರೆ(3) ಸೂರ್ಯಕುಮಾರ್ ಯಾದವ್(8), ಸಿದ್ದೇಶ್ ಲಾಡ್(2), ಸರ್ಫರಾಜ್ ಖಾನ್(0) ವಿಕೆಟ್ ಒಪ್ಪಿಸಿದರು. ಅಕ್ಸರ್ ಪರ್ಕರ್ ಕೊನೆಯಲ್ಲಿ 20 ರನ್ಗಳಿಸಿ ತಂಡದ ಮೊತ್ತವನ್ನು ನೂರರ ಸಮೀಪ ತಂದರು.
ಪುದುಚೇರಿ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ 41 ವರ್ಷದ ಶಾಂತ ಮೂರ್ತಿ 20ರನ್ ನೀಡಿ 5 ವಿಕೆಟ್ ಉಡಾಯಿಸಿದರು. ಅರವಿಂದರಾಜ್ 2, ಸಾಗರ್ ಉದಾಸಿ, ಅಶಿತ್ ರಾಜೀವ್ ಹಾಗೂ ಫಬಿದ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
95 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪುದುಚೇರಿ 19 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಟೂರ್ನಿಯಲ್ಲಿ 2ನೇ ಜಯ ಸಾಧಿಸಿತು. ಎಸ್ ಕಾರ್ತಿಕ್ 25, ಡಿ. ರೋಹಿತ್ 18 ಮತ್ತು ಶೆಲ್ಡಾನ್ ಜಾಕ್ಸನ್ 24 ರನ್ ಗಳಿಸಿದರು.
ಮುಂಬೈ ತಂಡ ಈ ಮೊದಲು ಡೆಲ್ಲಿ ವಿರುದ್ಧ 76 ರನ್ಗಳಿಂದ, ಕೇರಳ ವಿರುದ್ಧ 8 ವಿಕೆಟ್ಗಳಿಂದ ಸೋಲುಂಡಿತ್ತು. ಮಂಗಳವಾರ ಆಂಧ್ರಪ್ರದೇಶದ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಲಿದೆ.