ದುಬೈ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುಂಬೈ ತಂಡದ ಸೂರ್ಯಕುಮಾರ್ ಯಾದವ್ರನ್ನು ಕಡೆಗಣಿಸಿರುವುದಕ್ಕೆ ಕ್ರಿಕೆಟ್ ವಲಯದಲ್ಲಿ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸ್ವತಃ ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಯುವ ಬ್ಯಾಟ್ಸ್ಮನ್ ಯಾದವ್ ಪರ ಬ್ಯಾಟಿಂಗ್ ಮಾಡಿದ್ದಾರೆ.
2020ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನಕ್ಕೇರಲು ಸೂರ್ಯಕುಮಾರ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದಾರೆ. ಐಪಿಎಲ್ನಲ್ಲಿ ವಿಶ್ವದರ್ಜೆಯ ಬೌಲರ್ಗಳ ವಿರುದ್ಧ ಉತ್ತಮ ರನ್ ಗಳಿಸುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಉತ್ತಮ ರನ್ ಗಳಿಸಿದ್ದಿದ್ದರಿಂದ ಅವರು ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ಆಯ್ಕೆ ಸಮಿತಿ ವಿವಿಧ ಕಾರಣಗಳಿಂದ ಸೂರ್ಯಕುಮಾರ್ರನ್ನು ಕಡೆಗಣಿಸಿದೆ. ಈ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗಷ್ಟೇ ಅಲ್ಲದೆ ಕೆಲವು ಕ್ರಿಕೆಟ್ ಲೆಜೆಂಡ್ಗಳಿಗೂ ಅಚ್ಚರಿ ತಂದಿದೆ. ಕೆಲವರು ಈ ಬಲಗೈ ಬ್ಯಾಟ್ಸ್ಮನ್ ಭಾರತ ತಂಡಕ್ಕೆ ಅರ್ಹ ಆಟಗಾರ ಎಂದು ಒಲವು ತೋರಿಸಿದ್ದರು. ಇದೀಗ ಗಂಗೂಲಿ ಕೂಡ ಅದೇ ಮಾತನ್ನು ಒಪ್ಪಿಕೊಂಡಿದ್ದು, ಯಾದವ್ಗೆ ಶೀಘ್ರದಲ್ಲೇ ಒಳ್ಳೆಯ ಅವಕಾಶ ಬರಲಿದೆ ಎಂದು ತಿಳಿಸಿದ್ದಾರೆ.
"ಆತನೊಬ್ಬ ಉತ್ತಮ ಆಟಗಾರ, ಅವನ ಸಮಯ ಶೀಘ್ರದಲ್ಲಿ ಬರಲಿದೆ" ಎಂದು ಗಂಗೂಲಿ ಹೇಳಿದ್ದಾರೆ. ಜೊತೆಗೆ 2020ರ ಐಪಿಎಲ್ನಲ್ಲಿ ಸೂರ್ಯಕುಮಾರ್ ಹೊರತುಪಡಿಸಿ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಸಂಜು ಸಾಮ್ಸನ್, ಶುಬ್ಮನ್ ಗಿಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೇವದತ್ ಪಡಿಕ್ಕಲ್ರನ್ನು ದಾದಾ ಮೆಚ್ಚಿಕೊಂಡಿದ್ದಾರೆ.