ಮುಂಬೈ: 2019ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯಗೊಂಡ ಬಳಿಕ ಟೀಂ ಇಂಡಿಯಾ ಹಿರಿಯ ಪ್ಲೇಯರ್ ಎಂಎಸ್ ಧೋನಿ ಸರಣಿಗಳಿಂದ ಹೊರಗುಳಿಯುತ್ತಿದ್ದು, ಅವರ ಕ್ರಿಕೆಟ್ ನಿವೃತ್ತಿ ಬಗ್ಗೆ ಮೇಲಿಂದ ಮೇಲೆ ಹೆಚ್ಚಿನ ಗೊಂದಲ ಉದ್ಭವವಾಗುತ್ತಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುರೇಶ್ ರೈನಾ ತಮ್ಮದೇ ದಾಟಿಯಲ್ಲಿ ರಿಯಾಕ್ಷನ್ ನೀಡಿದ್ದಾರೆ.
ಧೋನಿ ಉತ್ತಮ ಗೆಳೆಯರಲ್ಲಿ ಒಬ್ಬರಾಗಿರುವ ಸುರೇಶ್ ರೈನಾ ಖಾಸಗಿ ಸುದ್ದಿವಾಹಿನಿವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಧೋನಿ ನಿವೃತ್ತಿ ಪಡೆದುಕೊಳ್ಳುವ ವಿಷಯವನ್ನ ಅವರಿಗೆ ಬಿಟ್ಟು ಬಿಡುವುದು ಒಳ್ಳೆಯದು. ಅದಕ್ಕೆ ಸಂಬಂಧಿಸಿದಂತೆ ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಧೋನಿ ಭಾಗಿಯಾಗಿ ತಂಡಕ್ಕೆ ಉತ್ತಮ ಸಲಹೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ದೈಹಿಕವಾಗಿ ಫಿಟ್ ಆಗಿರುವ ಧೋನಿ, ಓರ್ವ ಅದ್ಭುತ ವಿಕೆಟ್ ಕೀಪರ್ ಹಾಗೂ ಗ್ರೇಟ್ ಫಿನಿಶರ್ ಎಂಬುವುದರಲ್ಲಿ ಬೇರೆ ಮಾತಿಲ್ಲ ಎಂದು ತಿಳಿಸಿದ್ದಾರೆ.
2019ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಧೋನಿಯನ್ನ ಕೆಳೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರೈನಾ, ಅವರನ್ನ ಮೇಲಿನ ಕ್ರಮಾಂಕದಲ್ಲಿ ಆಡಿಸಬೇಕಾಗಿತ್ತು. ಪಂತ್ ವಿಕೆಟ್ ಬಿಳುತ್ತಿದ್ದಂತೆ ಧೋನಿ ಮೈದಾನಕ್ಕೆ ಇಳಿದಿದ್ದರೆ, ತದನಂತರ ಪಾಂಡ್ಯಾ, ಜಡೇಜಾ ಬ್ಯಾಟ್ ಬೀಸುತ್ತಿದ್ದರೂ ಎಂದು ತಿಳಿಸಿದ್ದಾರೆ. ಇದು ತಂಡದ ಗೆಲುವಿಗೆ ಸಹಕಾರಿಯಾಗುತ್ತಿತ್ತು ಎಂದು ತಿಳಿಸಿರುವ ಅವರು, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ತಾವು ಸೂಕ್ತ ಎಂಬ ಮಾತನ್ನು ಸಹ ಹೇಳಿದ್ದಾರೆ.
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬ್ಯಾಟ್ ಬೀಸುತ್ತಿರುವ ರೈನಾ, ಟೀಂ ಇಂಡಿಯಾ ತಂಡದಿಂದ ಹೊರಗುಳಿದು ಅನೇಕ ವರ್ಷಗಳೇ ಕಳೆದು ಹೋಗಿವೆ.