ಮೆಲ್ಬೋರ್ನ್: ಕೊರೊನಾ ವೈರಸ್ ಭೀತಿಯಿಂದ ಟಿ-20 ವಿಶ್ವಕಪ್ ಮೂಂದೂಡಬೇಕೆಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ವಿಶ್ವಕಪ್ ಮುಂದೂಡಲ್ಪಟ್ಟರೆ ತಾನು ಐಪಿಎಲ್ನಲ್ಲಿ ಆಡಲಿದ್ದೇನೆ ಎಂದು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟಿವ್ ಸ್ಮಿತ್ ಹೇಳಿದ್ದಾರೆ.
ವಿಶ್ವದೆಲ್ಲೆಡೆ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾದ ಕಾರಣ ಕಳೆದ ಮೂರು ತಿಂಗಳಿನಿಂದ ಯಾವುದೇ ಮಾದರಿಯ ಕ್ರಿಕೆಟ್ ನಡೆದಿಲ್ಲ. ಇದೀಗ ಮುಂಬರುವ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಕೂಡ ಮುಂದೂಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಐಪಿಎಲ್ ನಡೆದರೆ ಆಡುವುದಾಗಿ ಸ್ಟಿವ್ ಸ್ಮಿತ್ ಹೇಳಿದ್ದಾರೆ.
“ನಮ್ಮ ದೇಶದ ಪರವಾಗಿ ವಿಶ್ವಕಪ್‌ನಲ್ಲಿ ಆಡಬೇಕಾಗಿರುವಾಗ ಬೇರೆ ಏಕದಿನ ಅಥವಾ ಟಿ-20 ಕ್ರಿಕೆಟ್ ಆಡಲು ಒಪ್ಪಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ವಿಶ್ವಕಪ್ ಆಡಲು ಬಯಸುತ್ತೇನೆ. ಒಂದು ವೇಳೆ ಅದು ನಡೆಯದೇ ಹೋದರೆ ಐಪಿಎಲ್ನಲ್ಲಿ ಆಡಲು ಇಷ್ಟಪಡುತ್ತೇನೆ. ಏಕೆಂದರೆ ಐಪಿಎಲ್ ಕೂಡ ಅದ್ಭುತ ಟೂರ್ನಮೆಂಟ್ ಎಂದು” ಸ್ಮಿತ್ ಹೇಳಿದ್ದಾರೆ.
ಸ್ಟಿವ್ ಸ್ಮಿತ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲಿದ್ದಾರೆ. ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ 2018ರಲ್ಲಿ ಐಪಿಎಲ್ನಿಂದ ಹೊರಗಿದ್ದ ಸ್ಮಿತ್ 2019ರ ಐಪಿಎಲ್ನಲ್ಲಿ ಮತ್ತೆ ಟೂರ್ನಿಯ ಅರ್ಧದಲ್ಲಿ ರಾಜಸ್ಥಾನ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.