ಕೊಲಂಬೊ: ಲಂಕಾ ಪ್ರೀಮಿಯರ್ ಲೀಗ್ ಟಿ-20 ಟೂರ್ನಾಮೆಂಟ್ ಉದ್ಘಾಟನಾ ಆವೃತ್ತಿ ಆಗಸ್ಟ್ 28 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 20 ರಂದು ಮುಕ್ತಾಯಗೊಳ್ಳಲಿದೆ.
ಸೋಮವಾರ ನಡೆದ ಸಭೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಕಾರ್ಯಕಾರಿ ಸಮಿತಿ ಪಂದ್ಯಾವಳಿಗೆ ಅನುಮೋದನೆ ನೀಡಿದೆ.
ಲೀಗ್‌ನಲ್ಲಿ 23 ಪಂದ್ಯಗಳಿರಲಿದ್ದು, ಆರ್ ಪ್ರೇಮದಾಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಪಲ್ಲಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಸೂರ್ಯವೇವಾ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊಲಂಬೊ, ಕ್ಯಾಂಡಿ, ಗಾಲೆ, ದಂಬುಲ್ಲಾ ಮತ್ತು ಜಾಫ್ನಾ ನಗರಗಳ ಹೆಸರಿನ ಐದು ತಂಡಗಳು ಲೀಗ್‌ನಲ್ಲಿ ಭಾಗವಹಿಸಲಿವೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟಿಗರ ಜೊತೆಗೆ 70ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟಿಗರು ಹಾಗೂ ಟಾಪ್ 10 ಉನ್ನತ ದರ್ಜೆಯ ಕೋಚ್ಗಳು ಟೂರ್ನಮೆಂಟ್ನಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬೋರ್ಡ್ ಹೇಳಿದೆ.
ಲೀಗ್ನ ಶೀರ್ಷಿಕೆ ಬಿಡ್ಡಿಂಗ್ ಜುಲೈ 30 ರಂದು ಮುಕ್ತಾಯಗೊಳ್ಳಲಿದೆ. ನಂತರ ಟೂರ್ನಮೆಂಟ್ನ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಎಸ್‌ಎಲ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಇತರ ಕ್ರಿಕೆಟ್ ಆಡುವ ರಾಷ್ಟ್ರಗಳಿಗಿಂತ ಕೋವಿಡ್19 ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ.
ಜನಪ್ರಿಯ ಕ್ರಿಕೆಟ್ ವೆಬ್‌ಸೈಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಎಸ್‌ಎಲ್‌ಸಿ ಸಿಇಒ ಆಶ್ಲೇ ಡಿ ಸಿಲ್ವಾ ಅವರು ಆಗಸ್ಟ್ 1 ರಿಂದ ವಿದೇಶಿ ಆಟಗಾರರಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರದೊಂದಿಗೆ ಮಾತನಾಡಲಿದ್ದೇವೆ ಎಂದು ತಿಳಿಸಿದ್ದಾರೆ.