ಲಕ್ನೋ: ಪ್ರವಾಸಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆದ ಕೊನೆ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ನಿರಾಸೆಗೊಳಗಾಗಿದೆ. ಈ ಮೂಲಕ ತವರಿನಲ್ಲಿ ಮುಖಭಂಗಕ್ಕೊಳಗಾಗಿರುವ ಜೊತೆಗೆ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 4-1 ಅಂತರದ ಸೋಲು ಕಂಡಿದೆ.
ಲಕ್ನೋದ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಮಿಥಾಲಿ ಪಡೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕರಾಗಿ ಕಣಕ್ಕಿಳಿದ ಪ್ರಿಯಾ ಪೂನಿಯಾ(18) ಹಾಗೂ ಸ್ಮೃತಿ ಮಂದಾನಾ(18) ಉತ್ತಮ ಆರಂಭ ಒದಗಿಸಲಿಲ್ಲ. ಇದರ ಬೆನ್ನಲ್ಲೇ ಬಂದ ಪೂನಂ ರಾವತ್(10) ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಹೀಗಾಗಿ ತಂಡ 53ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು.
ಇದನ್ನೂ ಓದಿ: 5ನೇ ಏಕದಿನ ಪಂದ್ಯ: ಹರಿಣಗಳಿಗೆ 189 ರನ್ಗಳ ಸಾಧಾರಣ ಗುರಿ ನೀಡಿದ ಭಾರತ ಮಹಿಳಾ ತಂಡ
ಇದಾದ ಬಳಿಕ ಹರ್ಮನ್ಪ್ರೀತ್ ಕೌರ್(30), ಮಿಥಾಲಿ ರಾಜ್(79) ತಂಡಕ್ಕೆ ಚೇತರಿಕೆ ನೀಡಿದರು. ಇನ್ನು ಹರ್ಮನ್ಪ್ರೀತ್ ಕೌರ್ ಗಾಯದ ಕಾರಣ ರಿಟೈಡ್ ಹರ್ಟ್ ಆದರು. ಇದಾದ ಬಳಿಕ ಬಂದ ಹೇಮಲತಾ(2), ಸುಷ್ಮಾ ವರ್ಮಾ(0), ಗೋಸ್ವಾಮಿ(5), ಪಟೇಲ್(9), ಪ್ರತ್ಯುಶಾ(2) ಹಾಗೂ ಗಾಯ್ಕವಾಡ(0) ನಿರಾಸೆ ಮೂಡಿಸಿದರು.
ಆದರೆ ಕೊನೆಯವರೆಗೆ ಹೋರಾಟ ನಡೆಸಿದ ಕ್ಯಾಪ್ಟನ್ ಮಿಥಾಲಿ ರಾಜ್ ಅಜೇಯ 79ರನ್ಗಳಿಕೆ ಮಾಡಿದ್ದರಿಂದ ತಂಡ 49.3 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 188ರನ್ಗಳಿಕೆ ಮಾಡಿತು.
ಬೌಲಿಂಗ್ನಲ್ಲಿ ಮಿಂಚಿದ ದಕ್ಷಿಣ ಆಫ್ರಿಕಾ ನಾದಿನ್ ಡಿ ಕ್ಲೆರ್ಕ್ 3 ವಿಕೆಟ್, ಶಾಘೇಶಿ ಹಾಗೂ ಸೆಖುಖುನೆ 2 ವಿಕೆಟ್ ಪಡೆದುಕೊಂಡಿದ್ದು, ಕಪ್ಪಾ 1ವಿಕೆಟ್ ಪಡೆದು ಮಿಂಚಿದರು.
189 ರನ್ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿದ್ರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಮಿಗ್ನಾನ್ ಡು ಪ್ರೀಜ್ 57ರನ್, ಅನ್ನೈ ಬಿಸ್ಕೋ 58 ರನ್, ಕಪ್ಪಾ ಅಜೇಯ 36 ಹಾಗೂ ಕ್ಲೆರ್ಕ್ ಅಜೇಯ 19ರನ್ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಕೊನೆಯದಾಗಿ ತಂಡ 48.2 ಓವರ್ಗಳಲ್ಲಿ 5ವಿಕೆಟ್ ನಷ್ಟಕ್ಕೆ 189 ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ಜತೆಗೆ 5 ಪಂದ್ಯಗಳ ಸರಣಿಯಲ್ಲಿ 4-1 ಅಂತರದಿಂದ ಜಯಶಾಲಿಯಾಗಿ ಪ್ರಶಸ್ತಿಗೆ ಮುತ್ತಿಕ್ಕಿದೆ. ಸರಣಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಲಿಜೆಲ್ ಲೀ ಸರಣಿ ಶ್ರೇಷ್ಠ ಪ್ರಶಸ್ತಿಗೆ ಒಳಗಾದರು.