ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಈಗಲೂ ಕೈಯಲ್ಲಿ ಬ್ಯಾಟ್ ಹಿಡಿದು ಅಬ್ಬರಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳ ಕಠಿಣ ತರಬೇತಿ ಹಾಗೂ ಕೆಲ ರಣಜಿ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ರೆ ಮತ್ತೊಮ್ಮೆ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ರನ್ಗಳಿಕೆ ಮಾಡುತ್ತೇನೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.
ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಒಂದು ವೇಳೆ ನಾನು 2008ರಲ್ಲಿ ನಾಗ್ಪುರದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ನಿವೃತ್ತಿ ಪಡೆದುಕೊಳ್ಳದೇ ಮತ್ತೆರೆಡು ಏಕದಿನ ಸರಣಿಯಲ್ಲಿ ಆಡಿದ್ದಿದ್ದರೆ ಖಂಡಿತವಾಗಿಯೂ ಇನ್ನೂ ವಿಶೇಷ ಸಾಧನೆ ಮಾಡುತ್ತಿದ್ದೆ ಎಂದಿದ್ದಾರೆ.
ಈಗಲೂ ನನಗೆ ಮೂರು ತಿಂಗಳ ಕಠಿಣ ತರಬೇತಿ ಹಾಗೂ ಕೆಲ ರಣಜಿ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದರೆ ಮತ್ತೆ ಟೀಂ ಇಂಡಿಯಾಗಾಗಿ ರನ್ಗಳಿಸುತ್ತೇನೆ. ರನ್ ಕಲೆ ಹಾಕಲು ಅವಕಾಶ ನೀಡದಿದ್ದರೆ, ನಮ್ಮ ಮೇಲಿರುವ ನಂಬಿಕೆ ಉಳಿಸಿಕೊಳ್ಳುವುದು ಹೇಗೆ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
2007-2008ರಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ನನ್ನನ್ನು ತಂಡದಿಂದ ಕೈಬಿಡಲಾಗಿತ್ತು. ಕ್ಯಾಲೆಂಡರ್ ವರ್ಷದಲ್ಲಿ ಉತ್ತಮ ಸ್ಕೋರ್ ಗಳಿಕೆ ಮಾಡಲು ಸಾಧ್ಯವಾಗಿಲ್ಲ ಎಂಬುದು ಮುಖ್ಯವಾಗುವುದಿಲ್ಲ. ನಮ್ಮ ಕಾರ್ಯಕ್ಷಮತೆ ಎಷ್ಟೇ ಉತ್ತಮವಾಗಿದ್ರೂ, ನಮ್ಮಿಂದ ಅವಕಾಶ ಕಿತ್ತುಕೊಂಡರೆ ನಮ್ಮನ್ನು ನಾವು ಹೇಗೆ ಸಾಬೀತುಪಡಿಸಲು ಸಾಧ್ಯ?. ನನ್ನ ವಿಷಯದಲ್ಲೂ ಇದೇ ಆಯಿತು ಎಂದು ದಾದಾ ಬೇಸರ ವ್ಯಕ್ತಪಡಿಸಿದರು.
2007-08ರಲ್ಲಿ ಆಸ್ಟ್ರೇಲಿಯಾ ಟೂರ್ನಿಂದ ಗಂಗೂಲಿಯನ್ನು ಕೈಬಿಡುತ್ತಿದ್ದಂತೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು.
ಗಂಗೂಲಿ ಕ್ರಿಕೆಟ್ ಸಾಧನೆ:
113 ಟೆಸ್ಟ್ ಪಂದ್ಯಗಳಿಂದ 7,212 ರನ್ ಗಳಿಸಿದ್ದು, ಇದರಲ್ಲಿ 16 ಶತಕ ದಾಖಲಾಗಿದೆ. 311 ಏಕದಿನ ಪಂದ್ಯಗಳಿಂದ 11,363 ರನ್ ಗಳಿಸಿದ್ದು, ಇದರಲ್ಲಿ 22 ಶತಕ ಸೇರಿಕೊಂಡಿವೆ.
2012ರವರೆಗೂ ಗಂಗೂಲಿ ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್ನಲ್ಲಿ ಭಾಗಿಯಾಗಿದ್ದರು.