ಸೂರತ್: ಗಾಯದಿಂದ ಚೇತರಿಸಿಕೊಂಡಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು ರಣಜಿ ಕ್ರಿಕೆಟ್ ಆಡುವುದು ಬೇಡ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿಗೆ ತುತ್ತಾಗಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಎಲ್ಲಾ ಸರಣಿಗಳಿಂದ ಹೊರಗುಳಿದಿದ್ದರು. ಆದರೆ ಅವರು ಇದೀಗ ಚೇತರಿಸಿಕೊಂಡಿದ್ದು, ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.
ಬುಮ್ರಾ ಭಾರತ ತಂಡಕ್ಕೆ ಸೇರುವ ಮುನ್ನ ರಣಜಿ ಪಂದ್ಯದಲ್ಲಿ ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕು ಎಂದು ಬಿಸಿಸಿಐ ತಿಳಿಸಿತ್ತು. ಅದರಂತೆ ಬುಧವಾರದಿಂದ ಕೇರಳದ ವಿರುದ್ಧ ನಡೆಯುವ ರಣಜಿ ಪಂದ್ಯದಲ್ಲಿ ಆಡಲು ಬುಮ್ರಾ ನಿಶ್ಚಯಿಸಿದ್ದರು. ಆದರೆ ದಿನವೊಂದಕ್ಕೆ ಕೇವಲ 8 ಓವರ್ ಮಾತ್ರ ಬೌಲಿಂಗ್ ಮಾಡಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿತ್ತು. ಇದಕ್ಕೆ ಗುಜರಾತ್ ಕ್ರಿಕೆಟ್ ಒಪ್ಪದ್ದರಿಂದ ಬಿಸಿಸಿಐ ಅಧ್ಯಕ್ಷ ಗಂಗೂಲಿ ಬುಮ್ರಾರನ್ನು ರಣಜಿ ಕ್ರಿಕೆಟ್ನಿಂದ ದೂರ ಉಳಿದು ಸೀಮಿತ ಓವರ್ಗಳ ಕ್ರಿಕೆಟ್ನತ್ತ ಗಮನ ನೀಡಲು ಖಡಕ್ಕಾಗಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶಾಖಪಟ್ಟಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಬುಮ್ರಾ ಅಭ್ಯಾಸದ ಅವಧಿಯಲ್ಲಿ ಭಾರತೀಯ ತಂಡದೊಂದಿಗೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದರು. ಈ ಸಂದರ್ಭದಲ್ಲಿ ತರಬೇತಿ ಮತ್ತು ಫಿಸಿಯೋ ತಂಡ ರಾಷ್ಟ್ರೀಯ ತಂಡ ಸೇರಲು ಬುಮ್ರಾರಿಗೆ ಹಸಿರು ನಿಶಾನೆ ನೀಡಿತ್ತು.
ಡಿಸೆಂಬರ್ 5ರಿಂದ ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಹಾಗೂ ಡಿಸೆಂಬರ್ 14 ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ನಡೆಯಲಿದೆ.