ನವದೆಹಲಿ: ತಮ್ಮ ಜೀವನ ಚರಿತ್ರೆ 800 ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ಉಂಟಾಗಿರುವ ರಾಜಕೀಯ ವಿವಾದ ತಣ್ಣಗಾಗಿಸಲು ಬಯಸಿರುವ ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರುಳೀದರನ್, ತಾವೆಂದೂ ಮುಗ್ದ ತಮಿಳರ ಹತ್ಯೆ ಬೆಂಬಲಿಸಿಲ್ಲ ಎಂದು ಸುದೀರ್ಘ ತಮಿಳು ಬರಹವೊಂದನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಖ್ಯಾತಿಗೆ ಪಾತ್ರರಾಗಿರುವ ಮುರಳೀದರನ್ ಅವರ ಜೀವನ ಚರಿತ್ರೆ 800 ಎಂಬ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದು, ಇದರಲ್ಲಿ ಕಾಲಿವುಡ್ನ ಖ್ಯಾತ ನಟ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಆದರೆ, 3 ದಶತಕಗಳ ಹಿಂದೆ ಲಂಕಾದಲ್ಲಿ ನಡೆದಿದ್ದ ತಮಿಳರ ಹತ್ಯೆಯ ವಿಚಾರದಲ್ಲಿ ಮುರುಳೀದರನ್ ಅವರನ್ನು ಟಾರ್ಗೆಟ್ ಮಾಡಿ ಈ ಸಿನಿಮಾ ಮಾಡಬಾರದು ಎಂದು ಕೆಲವು ತಮಿಳು ಸಂಘಟನೆಗಳು ಆಗ್ರಹ ವ್ಯಕ್ತಪಡಿಸಿವೆ.
ಈ ವಿವಾದಕ್ಕೆ ಸಂಬಂಧಪಟ್ಟಂತೆ ತಮಿಳಿನಲ್ಲಿ ವಿವರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, "1970 ರ ದಶಕದ ಆರಂಭದಲ್ಲಿ ತಮಿಳರ ಮೇಲಿನ ದಾಳಿಗಳು, ಜನತಾ ವಿಮುಕ್ತಿ ಪೆರಮುನಾ ದಂಗೆ ಮತ್ತು ಹಲವಾರು ಬಾಂಬ್ ಸ್ಫೋಟಗಳಿಂದ ಉಂಟಾದ ಗಲಭೆಗಳು ನನ್ನ ಕುಟುಂಬವನ್ನು ತೀವ್ರವಾಗಿ ಬಾಧಿಸಿದೆ" ಎಂದು ಶ್ರೀಲಂಕಾದಲ್ಲಿ ತಮಿಳಿಗನಾಗಿ ತಾವೂ ನಾಗರಿಕ ಯುದ್ಧವನ್ನು ಕಂಡ ಬಗೆಯನ್ನು ವಿವರವಾಗಿ ಬರೆದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ 800 ಚಿತ್ರದಲ್ಲಿ ಮುರುಳಿ ಅವರ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ತಮಿಳು ಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಆದರೆ, ಚಿತ್ರೋದ್ಯಮದ ಕೆಲವರು ವಿಜಯ್ ಸೇತುಪತಿ ಚಿತ್ರದಲ್ಲಿ ನಟಿಸಬಾರದು, ಚಿತ್ರವನ್ನು ಕೈಬಿಡಬೇಕೆಂದು ಸಹ ಒತ್ತಾಯಿಸಿದ್ದರೆ, ಕೆಲವರು ಅವರ ಪರ ಮಾತನಾಡಿದ್ದಾರೆ.
ಸಿನಿಮಾ ಬಗ್ಗೆಯೂ ಬರೆದುಕೊಂಡಿರುವ ಅವರ, "ತಮ್ಮ ಜೀವನ ಕುರಿತು ಸಿನೆಮಾ ಮಾಡುತ್ತೇವೆ ಎಂದು ಬಂದಾಗ ಆರಂಭದಲ್ಲಿ ಒಪ್ಪಿರಲಿಲ್ಲ. ಆದರೂ ಕೊನೆಗೆ ತಾವು ಈ ಮಟ್ಟಕ್ಕೆ ಬೆಳೆಯಲು, ತಮ್ಮ ಸಾಧನೆಗೆ ಕಾರಣರಾದ ಪೋಷಕರು, ಕೋಚ್ ಮತ್ತು ಹಲವರ ಬಗ್ಗೆ ಕಥೆಯಲ್ಲಿ ಹೇಳುವುದರಿಂದ ಚಿತ್ರ ಮಾಡಲು ಒಪ್ಪಿಗೆ ನೀಡಿದೆ" ಟ್ವಿಟರ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.