ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಆರು ಅಭ್ಯರ್ಥಿಗಳು ಬಿಸಿಸಿಐನಿಂದ ಫೈನಲ್ ಆಗಿದ್ದು, ಆಗಸ್ಟ್ 16ರಂದು ಅವರ ಸಂದರ್ಶನ ನಡೆಯಲಿದೆ.
ಟೀಂ ಇಂಡಿಯಾ ಪ್ರಮುಖ ಹುದ್ದೆ ಮೇಲೆ ಕಣ್ಣಿಟ್ಟು ಬರೋಬ್ಬರಿ 2 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಅದರ ಶಾರ್ಟ್ ಲಿಸ್ಟ್ ಮಾಡಿರುವ ಬಿಸಿಸಿಐ ಆರು ಜನರನ್ನ ಫೈನಲ್ ಸಂದರ್ಶಕ್ಕಾಗಿ ಆಯ್ಕೆ ಮಾಡಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ನ್ಯೂಜಿಲ್ಯಾಂಡ್ನ ಮಾಜಿ ಕೋಚ್ ಮೈಕ್ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಹಾಗೂ ಶ್ರೀಲಂಕಾ ಕೋಚ್ ಟಾಮ್ ಮೊಡಿ, ಆಫ್ಘಾನಿಸ್ತಾನದ ಕೋಚ್ ಸಿಮನ್ಸ್, ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಲಾಲ್ಚಂದ್ ರಜಪೂತ್, ರಾಬಿನ್ ಸಿಂಗ್ ಫೈನಲ್ ಆಗಿದ್ದು, ಇವರ ಜತೆ ಟೀಂ ಇಂಡಿಯಾ ಹಾಲಿ ಕೋಚ್ ರವಿಶಾಸ್ತ್ರಿ ಕೂಡ ರೇಸ್ನಲ್ಲಿದ್ದಾರೆ.
ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಆಗಸ್ಟ್ 16ರಂದು ಸಂದರ್ಶನ ನಡೆಸಲಿದ್ದು, ಇವರಲ್ಲಿ ಒಬ್ಬರು ಮಾತ್ರ ತಂಡದ ಕೋಚ್ ಹುದ್ದೆ ಅಲಂಕಾರ ಮಾಡಲಿದ್ದಾರೆ.
ರವಿಶಾಸ್ತ್ರಿಗೆ ಮಣೆ!?
ಇನ್ನು ವೆಸ್ಟ್ ಇಂಡೀಸ್ ಟೂರ್ ಬೆಳೆಸುವುದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತನಾಡಿ, ನನ್ನ ಅಭಿಪ್ರಾಯ ಕೇಳಿದ್ರೆ ಖಂಡಿತವಾಗಿ ನಾನು ರವಿಶಾಸ್ತ್ರಿ ಅವರನ್ನೇ ನಾಮನಿರ್ದೇಶನ ಮಾಡುವೆ ಎಂದಿದ್ದರು. ಇದೀಗ ಫೈನಲ್ ಲಿಸ್ಟ್ನಲ್ಲಿ ಅವರ ಹೆಸರು ಇರುವುದರಿಂದ ಮತ್ತೊಂದು ಅವಧಿಗೆ ಆಯ್ಕೆಯಾದರೂ ಆಶ್ಚರ್ಯ ಪಡಬೇಕಿಲ್ಲ.
ವಿಶ್ವಕಪ್ ವೇಳೆ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹಾಗೂ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರ ಕಾಲಾವಧಿ 45 ದಿನಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಇದೀಗ ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದ್ದು, ಇವರ ಅವಧಿ ಮುಗಿದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆಗೆ ನೂತನ ಕೋಚ್ಗಳು ತಂಡವನ್ನ ಸೇರಿಕೊಳ್ಳಲಿದ್ದಾರೆ.