ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಭಾಗವಾಗಲಿರುವ ಅಂಡರ್ 19 ವಿಶ್ವಕಪ್ ಮೂಲಕ ಬೆಳಕಿಗೆ ಬಂದಿರುವ ಶುಬ್ಮನ್ ಗಿಲ್ ಭಾರತದ ಭವಿಷ್ಯದ ಸ್ಟಾರ್ ಕ್ರಿಕೆಟಿಗನಾಗಲಿದ್ದಾರೆ ಎಂದು ಭಾರತದ ಲೆಜೆಂಡ್ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 21 ವರ್ಷದ ಆಟಗಾರನಿಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿದರೆ ಅವರ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತಾರೆ ಮತ್ತು ಕೆಕೆಆರ್ ತಂಡಕ್ಕೂ ಸ್ಥಿರವಾಗಿ ರನ್ಗಳಿಸಲಿದ್ದಾರೆ ಎಂದು ಸ್ಪೋರ್ಟ್ಸ್ಟಾಕ್ ಕಾರ್ಯಕ್ರಮದಲ್ಲಿ ಗವಾಸ್ಕರ್ ತಿಳಿಸಿದ್ದಾರೆ.
"ಕೆಕೆಆರ್ ತಂಡವೇನಾದರೂ ಶುಬ್ಮನ್ ಗಿಲ್‌ಗೆ ಸಾಕಷ್ಟು ಆತ್ಮವಿಶ್ವಾಸ ತುಂಬಿದರೆ, ಪ್ರತಿ ಪಂದ್ಯದಲ್ಲೂ ಆಡುವ ಅವಕಾಶ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಬಡ್ತಿ ನೀಡುವುದಾಗಿ ಹೇಳಿದರೆ, ಅವರು ಖಂಡಿತ ತಮ್ಮ ನೈಜ ಸಾಮರ್ಥ್ಯ ತೋರಿಸಬಲ್ಲರು. ಆತ ಒಬ್ಬ ಕ್ಲಾಸ್ ಆಟಗಾರನಾಗಿದ್ದು, ನೀವು ಭಾರತ ತಂಡದ ಯಾವುದೇ ದೊಡ್ಡ ಹೆಸರು ಮಾಡಿದ ಆಟಗಾರನ್ನು ಭವಿಷ್ಯದ ತಾರೆ ಯಾರು ಎಂದು ಕೇಳಿದರೆ, ಅವರೆಲ್ಲರೂ ಶುಬ್ಮನ್ ಗಿಲ್ ಹೆಸರನ್ನೇ ಹೇಳುತ್ತಾರೆ. ಹೀಗಾಗಿ ತಾವೂ ಭವಿಷ್ಯದ ತಾರೆಯಾಗಲು ಅರ್ಹ ಎಂದು ತೋರಿಸಲು ಗಿಲ್‌ಗೆ ಐಪಿಎಲ್ ಒಂದು ಅದ್ಭುತ ಅವಕಾಶವಾಗಿದೆ" ಎಂದು ತಿಳಿಸಿದ್ದಾರೆ.
ಕಳೆದ ಐಪಿಎಲ್ನಲ್ಲಿ 14 ಪಂದ್ಯಗಳಿಂದ 196 ರನ್ ಸಿಡಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದರು. ಆದರೆ, ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿದ್ದರಿಂದ ಹೆಚ್ಚಿನ ಎಸೆತಗಳನ್ನು ಎದುರಿಸುವ ಅವಕಾಶ ಸಿಕ್ಕಿರಲಿಲ್ಲ. ಪ್ರಸ್ತುತ ಕೆಕೆಆರ್ ಕೋಚ್ ಆಗಿರುವ ಬ್ರೆಂಡನ್ ಮೆಕಲಮ್ ಈ ಬಾರಿ ಗಿಲ್‌ಗೆ ಆರಂಭಿಕನಾಗಿ ಬಡ್ತಿ ನೀಡುವುದರ ಜೊತೆಗೆ ತಂಡದ ನಾಯಕತ್ವದ ವಿಭಾಗದಲ್ಲೂ ಅವರನ್ನು ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.