ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಮೂರು ಟೆಸ್ಟ್ ಪಂದ್ಯಗಳ ಕ್ರಿಕೆಟ್ ಸರಣಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಆರಂಭಿಕ ಕೆಎಲ್ ರಾಹುಲ್ ಜಾಗಕ್ಕೆ 20 ವರ್ಷದ ಉದಯೋನ್ಮುಖ ಆಟಗಾರ ಶುಬಮನ್ ಗಿಲ್ ಚಾನ್ಸ್ ಪಡೆದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆರಂಭಿಕ ಬ್ಯಾಟ್ಸ್ಮನ್ ಕನ್ನಡಿಗ ಕೆಎಲ್ ರಾಹುಲ್ ವಿರುದ್ಧ ಅನೇಕ ಟೀಕೆಗಳು ಕೇಳಿ ಬಂದ ಕಾರಣ, ಅವರ ಜಾಗಕ್ಕೆ ಶುಬಮನ್ ಆಯ್ಕೆಯಾಗಿದ್ದಾರೆ. ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಕಲೆ ಕರಗತ ಮಾಡಿಕೊಂಡಿರುವ ಕಾರಣಕ್ಕಾಗಿ ಈ ಆಟಗಾರನಿಗೆ ಬಿಸಿಸಿಐ ಆಸಕ್ತಿ ತೋರಿದೆ. ತಂಡದಲ್ಲಿ ಉತ್ತಮ ಬ್ಯಾಕಪ್ ಪ್ಲೇಯರ್ ಆಗಿ ಇವರು ಇರಬಲ್ಲರು ಎಂದು ಎಂಎಸ್ಕೆ ಪ್ರಸಾದ್ ತಿಳಿಸಿದ್ದಾರೆ.
ಅಂಡರ್ 19 ವಿಶ್ವಕಪ್ ಸ್ಟಾರ್ ಆಟಗಾರನಾಗಿರುವ ಶುಬಮನ್ ಗಿಲ್ ಈಗಾಗಲೇ ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕಾರಣ ಅವಕಾಶ ನೀಡಲಾಗಿದ್ದು, ಒಂದು ವೇಳೆ ತಂಡದಲ್ಲಿ ಮಿಂಚು ಹರಿಸಿದ್ರೆ, ಮುಂಬರುವ ಟಿ-20 ವಿಶ್ವಕಪ್ನಲ್ಲೂ ಅವಕಾಶ ಪಡೆಯೋದ್ರಲ್ಲಿ ಸಂದೇಹವಿಲ್ಲ. ನಿರಾಯಾಸವಾಗಿ ಬ್ಯಾಟಿಂಗ್ ಬೀಸುವ ಕಲೆ ಕರಗತ ಮಾಡಿಕೊಂಡಿರುವ ಈ ಪ್ಲೇಯರ್ ತಮ್ಮ ದೊಡ್ಡ ಹೊಡೆತಗಳಿಂದ ತಂಡಕ್ಕೆ ವರವಾಗಬಲ್ಲರು ಎಂಬುದು ಆಯ್ಕೆ ಸಮಿತಿ ಲೆಕ್ಕಾಚಾರವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದು ಮಿಂಚಿರುವ ಗಿಲ್, ಈಗಾಗಲೇ ದೇಶಿ ಕ್ರಿಕೆಟ್ನಲ್ಲಿ ಮಹತ್ವದ ದಾಖಲೆ ಸಹ ನಿರ್ಮಿಸಿದ್ದಾರೆ.