ಮೆಲ್ಬೋರ್ನ್: ಟೀಂ ಇಂಡಿಯಾ ಯುವ ಕ್ರಿಕೆಟಿಗ ಶುಬ್ಮನ್ ಗಿಲ್ರನ್ನು ಶ್ಲಾಘಿಸಿದ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್, ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ತಮ್ಮನ್ನು ಹೇಗೆ ಮೆಚ್ಚಿಸಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ 39 ಎಸೆತಗಳಲ್ಲಿ 33 ರನ್ ಗಳಿಸಿದ್ದರು. ಅಲ್ಲದೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ತೋರಿದ ಪ್ರದರ್ಶನ ಮೆಕ್‌ಗ್ರಾತ್ ಗಮನ ಸೆಳೆದಿದೆ.
ಏಕದಿನ ಸರಣಿಯಲ್ಲಿ ಶುಬ್ಮನ್ ಗಿಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸೇರಿದವರಂತೆ ಕಾಣುತ್ತಿದ್ದಾರೆಂದು ಭಾವಿಸಿದ್ದೇನೆ ಎಂದು ಮೆಕ್‌ಗ್ರಾತ್ ಹೇಳಿದ್ದಾರೆ. ಆದಾಗ್ಯೂ, ಅಂದಿನ ಪಂದ್ಯದಲ್ಲಿ ಗಿಲ್ ಹೆಚ್ಚು ಕಾಲ ಕ್ರೀಸ್ನಲ್ಲಿ ಕಚ್ಚಿ ನಿಲ್ಲಲಿಲ್ಲ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ 45 ರನ್ ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ.
"ಏಕದಿನ ಪಂದ್ಯದ ಸಮಯದಲ್ಲಿ ಅವರನ್ನು ನೋಡಿದಾಗ, ಅವರು ಉತ್ತಮ ತಂತ್ರವನ್ನು ಹೊಂದಿದ್ದಾರೆಂದು ನಾನು ಭಾವಿಸಿದೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸೇರಿದವನಂತೆ ಕಾಣುತ್ತಿದ್ದರು" ಎಂದು ಮೆಕ್‌ಗ್ರಾತ್ ಹೇಳಿದ್ದಾರೆ.
ಇದೀಗ ಶುಬ್ಮನ್ ಗಿಲ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, "ಸ್ಟಾರ್ಕ್ ಮತ್ತು ಕಮ್ಮಿನ್ಸ್ ಅವರಂಥ ಬಲಿಷ್ಠ ಬೌಲರ್ಗಳ ಮುಂದೆ ಬಹಳ ಕಠಿಣ ಪರಿಚಯವಾಗಿದೆ, ಗಿಲ್ ನೀಡಿದ್ದ ಕ್ಯಾಚ್ ಅನ್ನು ಲಾಬುಶೇನ್ ಕೈ ಚೆಲ್ಲಿದ್ರು. ಆ ಒಂದು ಎಸೆತ ಬಿಟ್ಟರೆ ಉಳಿದ ಸಮಯದಲ್ಲಿ ಶುಬ್ಮನ್, ಸಾಲಿಡ್ ಪ್ರದರ್ಶನ ನೀಡಿದ್ರು" ಎಂದು ಯುವ ಆಟಗಾರನನ್ನು ಮೆಕ್‌ಗ್ರಾತ್ ಕೊಂಡಾಡಿದ್ದಾರೆ.