ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಡೆಲ್ಲಿ ಕ್ಯಾಪಿಟಲ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ. ಅವರು ನಾಯಕನ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಅಯ್ಯರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬೆಸ್ಟ್ ಮ್ಯಾನ್ ಫಾರ್ ದಿ ಜಾಬ್(ಈ ಕೆಲಸಕ್ಕೆ ಉತ್ತಮ ವ್ಯಕ್ತಿ) ಎಂದು ಹೇಳಿಕೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಮಿಂಚು ಹರಿಸುತ್ತಿರುವ ಪಂತ್ ಕಳೆದ ಕೆಲ ವರ್ಷಗಳಿಂದ ಡೆಲ್ಲಿ ತಂಡದ ಭಾಗವಾಗಿದ್ದು, ಕೆಲವೊಂದು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ: IPL 2021: ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಬಡ್ತಿ ಪಡೆದ ರಿಷಭ್ ಪಂತ್
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಭುಜದ ನೋವಿಗೊಳಗಾಗಿ ಟೂರ್ನಿಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಇದೀಗ ಮುಂಬರುವ ಐಪಿಎಲ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಹೀಗಾಗಿ ಡೆಲ್ಲಿ ತಂಡ ರಿಷಭ್ ಪಂತ್ಗೆ ನಾಯಕತ್ವದ ಜವಾಬ್ದಾರಿ ನೀಡಿದೆ. ರಿಷಭ್ ಪಂತ್ಗೆ ಶುಭಾಶಯ ತಿಳಿಸಿರುವ ಶ್ರೇಯಸ್ ಅಯ್ಯರ್, ಈ ಕೆಲಸಕ್ಕೆ ಉತ್ತಮ ವ್ಯಕ್ತಿ. ಇದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದಿದ್ದಾರೆ.
ರಿಷಭ್ ಪಂತ್ ಪ್ರತಿಕ್ರಿಯೆ:
ಡೆಲ್ಲಿ ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ರಿಷಭ್ ಪಂತ್, ತಂಡಕ್ಕಾಗಿ ಪೂರ್ಣ ಪ್ರಮಾಣದ ಕೊಡುಗೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷ ಫೈನಲ್ ಪ್ರವೇಶಿಸಿದ ಡೆಲ್ಲಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಾಣುವ ಮೂಲಕ ರನ್ನರ್ ಅಪ್ ಆಗಿ ಹೊರಹೊಮ್ಮಿತು.