ಮುಂಬೈ: ಭಾರತ ತಂಡವನ್ನು ಮುನ್ನಡೆಸಿದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜೀವನ ಬಹುತೇಕ ಅಂತ್ಯಗೊಂಡಿದೆ. ಪ್ರಸ್ತುತ ದ. ಆಫ್ರಿಕಾ ಸರಣಿಗೆ ಧೋನಿಯನ್ನು ಪರಗಣಿಸದಿರುವುದರಿಂದ ಬಿಸಿಸಿಐ ಧೋನಿಯ ನಿವೃತ್ತಿಗೆ ಕಾಯುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಧೋನಿ ಭಾರತ ತಂಡವನ್ನು ಎಲ್ಲಾ ಫಾರ್ಮೇಟ್ಗಳಲ್ಲೂ ಬಲಿಷ್ಠ ತಂಡವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಧೋನಿಗೆ ಉತ್ತಮವಾಗಿ ಬೀಳ್ಕೊಡುಗೆ ನೀಡಬೇಕೆಂದು ಭಾರತ ತಂಡದ ಮಾಜಿ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಧೋನಿ ಮುಂದೆ ಕ್ರಿಕೆಟ್ ಆಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಬಿಸಿಸಿಐ ಆಯ್ಕೆ ಸಮಿತಿ ಧೋನಿಯೊಂದಿಗೆ ಇದರ ಬಗ್ಗೆ ಮಾತನಾಡುವ ಅಗತ್ಯವಿದೆ. ಒಂದು ವೇಳೆ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವ ಆಲೋಚನೆ ಇಲ್ಲದಿದ್ದರೆ ಅವರಿಗೆ ಉತ್ತಮವಾದ ಬೀಳ್ಕೊಡುಗೆ ನೀಡಬೇಕು. ಧೋನಿ ಅದಕ್ಕೆ ಅರ್ಹರಾಗಿದ್ದಾರೆ ಎಂದು ಕುಂಬ್ಳೆ ಹೇಳಿದ್ದಾರೆ.
ರಿಷಭ್ ಪಂತ್ ಪ್ರಸ್ತುತ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಆಯ್ಕೆ ಸಮಿತಿ ಪಂತ್ಗೆ ಮತ್ತಷ್ಟು ಅವಕಾಶ ನೀಡಬೇಕೆಂದಿದೆಯೋ ಅಥವಾ ಮತ್ತೊಬ್ಬ ವಿಕೆಟ್ ಕೀಪರ್ ಎದುರು ನೋಡುತ್ತಿದಿಯೋ ಅಥವಾ ಧೋನಿಯನ್ನೇ ಮತ್ತೆ ಕರೆಸಿಕೊಳ್ಳಬೇಕೆಂದಿದೆಯೋ ಗೊತ್ತಿಲ್ಲ. ಆದರೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ವಿಶ್ವಕಪ್ವರಗೆ ತಂಡದಲ್ಲಿರಬೇಕೆಂಬುದಾದರೆ ಅವರಿಗೆ ಎಲ್ಲಾ ಪಂದ್ಯಗಳಲ್ಲೂ ಆಡುವ ಅಗತ್ಯವಿದೆ. ಅವರ ಆಯ್ಕೆ ಅಗತ್ಯವಿಲ್ಲ ಎಂದಾದರೆ ಮುಂದಿನ ಕೆಲವು ತಿಂಗಳೊಳಗೆ ಧೋನಿ ಜೊತೆ ಬೀಳ್ಕೊಡುಗೆ ಬಗ್ಗೆ ಮಾತನಾಡಿ ಸ್ಪಷ್ಟಪಡಿಸಿಕೊಳ್ಳಿ ಎಂದು ಆಯ್ಕೆ ಸಮಿತಿಗೆ ಕಿವಿಮಾತು ಹೇಳಿದ್ದಾರೆ.