ಮುಂಬೈ: ಭಾರತ ತಂಡದ ಸ್ಟಾರ್ ಓಪನಿಂಗ್ ಬ್ಯಾಟ್ಸ್ಮನ್ ಶಿಖರ್ ಧವನ್ ಪಾಲಿಗೆ ಟೆಸ್ಟ್ ಕ್ರಿಕೆಟ್ ಬಾಗಶಃ ಅಂತ್ಯವಾದಂತೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭಾರತದ ಅತ್ಯುತ್ತಮ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದ ಶಿಖರ್ ಧವನ್ ಭಾರತದ ಪರ 34 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 7 ಶತಕಗಳ ಸಹಿತ 40.61ರ ಸರಾಸರಿಯಲ್ಲಿ 2315 ರನ್ ಗಳಿಸಿದ್ದಾರೆ. ಆದರೆ 2018ರಲ್ಲಿ ಕಳೆಪೆ ಬ್ಯಾಟಿಂಗ್ ಕಾರಣ ಟೆಸ್ಟ್ ತಂಡದಿಂದ ಹೊರ ಬಿದ್ದಿದ್ದರು. 2018ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಟೆಸ್ಟ್ನಲ್ಲಿ ಕಾಣಿಸಿಕೊಂಡಿದ್ದರು.
34 ವರ್ಷದ ಧವನ್ ಮತ್ತೆ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯುವರೇ ಎಂಬ ಪ್ರಶ್ನೆಗೆ ಆಕಾಶ್ ಚೋಪ್ರಾ, 'ಅನುಮಾನ' ಎಂದು ಉತ್ತರಿಸಿದ್ದಾರೆ.
"ಅವಕಾಶ ಸಿಗುವುದಿಲ್ಲ ಎಂದು ಹೇಳಬೇಡಿ, ಅವರಿಗೆ ಅವಕಾಶ ಸಿಗಬಹುದು. ಆದರೆ ಆದಷ್ಟು ಬೇಗ ಅವರಿಗೆ ಅವಕಾಶ ಸಿಗುವುದೇ? ಟೆಸ್ಟ್ ತಂಡದಲ್ಲಿ ಓಪನರ್‌ಗಳಾಗಿ ಈಗಾಗಲೇ ಹಲವಾರು ಆಯ್ಕೆಗಳು ಇರುವುದರಿಂದ ಸದ್ಯಕ್ಕೆ ಶಿಖರ್ ಧವನ್ ಆಯ್ಕೆ ಸಂಭವಿಸಬಹುದು ಎಂದು ನಾನು ಭಾವಿಸುವುದಿಲ್ಲ" ಎಂದು ಚೋಪ್ರಾ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ ಮತ್ತು ಕೆ.ಎಲ್.ರಾಹುಲ್ರಂತಹ ಹೆಸರುಗಳು ಭಾರತ ತಂಡದ ನಾಲ್ಕು ಆಯ್ಕೆಗಳಾಗಿವೆ. 5ನೇ ಸ್ಥಾನದಲ್ಲಿರುವ ಧವನ್ ಮೊದಲು ಹೊಂದಿದ್ದ ಶಕ್ತಿಯ ಸ್ಥಾನವನ್ನು ಈಗ ಹೊಂದಿಲ್ಲ ಮತ್ತು ಆ ಸವಲತ್ತು ಇನ್ನು ಮುಂದೆ ಸಿಗುವುದಿಲ್ಲ. ಆದ್ದರಿಂದ ಶಿಖರ್ ಧವನ್ ಭವಿಷ್ಯದಲ್ಲಿ ಯಾವಾಗದಲಾದರೂ ತಂಡದಲ್ಲಿ ಸ್ಥಾನ ಪಡೆಯಹುದೇನೋ, ಆದರೆ ಸದ್ಯದಲ್ಲಿ ಸಾಧ್ಯವಿಲ್ಲ. ಏಕೆಂದರೆ ತಂಡ ಅವರನ್ನು ಬಿಟ್ಟು ಮುಂದೆ ಹೋಗಿದೆ ಎಂದು ಅವರು ವಿವರಿಸಿದ್ದಾರೆ.