ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಮಜ್ಲಿಸ್ ಮೆಟ್ರೋ ನಿಲ್ದಾಣದ ಬಳಿ ವಾಸಿಸುತ್ತಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತ ಶಿಬಿರಕ್ಕೆ ಭೇಟಿ ನೀಡಿ , ಅಲ್ಲಿನ ನಿವಾಸಿಗಳ ಜೊತೆ ಕೆಲ ಸಮಯ ಕಳೆದಿದ್ದಾರೆ.
ಕೊರೊನಾ ಸಂಕಷ್ಟದಲ್ಲಿರುವ ನಿರಾಶ್ರಿತರಿಗೆ ಕ್ರಿಕೆಟಿಗ ಧವನ್ ಭೇಟಿ ನಿಜಕ್ಕೂ ಸಂತಸ ತಂದಿದೆ. ಈ ಸಂದರ್ಭದಲ್ಲಿ ನಿರಾಶ್ರಿತರಿಗೆ ಧೈರ್ಯ ತುಂಬಿರುವ ಧವನ್ ಒಂದಷ್ಟು ಸ್ಥಳಾಂತರಿಸಬಹುದಾದ ಪ್ಲಾಸ್ಟಿಕ್ನಿಂದ ನಿರ್ಮಿಸಿರುವ ಶೌಚಾಲಯಗಳನ್ನು ಉಡುಗೊರೆ ನೀಡಿದ್ದಾರೆ.
ಇದರ ಜೊತೆಗೆ ಅಲ್ಲಿ ಮಕ್ಕಳಿಗೆ ಕ್ರಿಕೆಟ್ ಕಿಟ್ಗಳನ್ನು ನೀಡಿದ ಧವನ್ ಕೆಲವು ಸ್ಪೂರ್ತಿದಾಯಕ ಮಾತುಗಳನ್ನಾಡಿ, ನೀವಾಗಿಯೇ ಸಮಾಜದಲ್ಲಿ ಹೆಸರು ಸಂಪಾದಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅದೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಭುಜದ ನೋವಿಗೆ ತುತ್ತಾಗಿ ಕಿವೀಸ್ ವಿರುದ್ಧದ ಸರಣಿಯಿಂದ ತಪ್ಪಿಸಿಕೊಂಡಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾದರಾದರೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಸರಣಿ ಮುಂದೂಡಲಾಗಿತ್ತು.