ದೆಹಲಿ: ಏಕದಿನ ಮಾದರಿಯ ಕ್ರಿಕೇಟ್ನಲ್ಲಿ ಪಂದ್ಯ 'ಟೈ' ಆದ್ರೆ ಸೂಪರ್ ಓವರ್ ಅಗತ್ಯವಿಲ್ಲವೆಂದು ನ್ಯೂಜಿಲೆಂಡ್ ಹಿರಿಯ ಅಟಗಾರ ರಾಸ್ ಟೇಲರ್ ಹೇಳಿದ್ದಾರೆ. ವಿಶ್ವಕಪ್ನಂತಹ ಸಂದರ್ಭದಲ್ಲಿ ಪಂದ್ಯಗಳು ಟೈ ಆದ್ರೆ ಟ್ರೋಫಿಯನ್ನು ಹಂಚಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕಳೆದ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯ ಟೈ ಆದಾಗ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜೇತ ತಂಡ ಎಂದು ಘೋಷಿಸಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೀಕೆಗೆ ಗುರಿಯಾಗಿತ್ತು.
ಈ ಸಂಬಂಧ ಕ್ರಿಕೆಟ್ ವೆಬ್ಸೈಟ್ ಜೊತೆ ಮಾತನಾಡಿದ ಟೇಲರ್ ನಾನು ಏಕದಿನ ಪಂದ್ಯದಲ್ಲಿ ಸೂಪರ್ ಓವರ್ನ್ನು ಒಪ್ಪಿಕೊಳ್ಳುವುದಿಲ್ಲ. ಏಕದಿನ ಕ್ರಿಕೆಟ್ನ್ನು ದೀರ್ಘಕಾಲ ಆಡಲಾಗುತ್ತದೆ. ಹಾಗಾಗಿ ಟೈ ಆಗಿರುವುದನ್ನು ಟೈ ಎಂದು ಘೋಷಿಸಿ ಟ್ರೋಫಿ ಹಂಚಿಕೊಂಡರೆ ಯಾವುದೇ ತೊಂದರೆ ಇಲ್ಲವೆಂದು ಹೇಳಿದ್ದಾರೆ.
ಟಿ-20 ಪಂದ್ಯವನ್ನು ಫುಟ್ಬಾಲ್ ಮಾದರಿಯಲ್ಲಿ ಸೂಪರ್ ಓವರ್ ಮೂಲಕ ಗೆಲುವು ನಿರ್ಧರಿಸುವುದು ಉತ್ತಮ. ಆದರೆ ಏಕದಿನ ಪಂದ್ಯಗಳಲ್ಲಿ ಟೈ ಆದಾಗ ಸೂಪರ್ ಓವರ್ ಬದಲು ಜಂಟಿ ವಿನ್ನರ್ ಎಂದು ಘೋಷಿಸಬೇಕು ಎಂದಿದ್ದಾರೆ.
ವಿಶ್ವಕಪ್ ಫೈನಲ್ ಮುಗಿದ ಬಳಿಕ 'ಉತ್ತಮ ಆಟ'ವೆಂದು ಹೇಳಲು ಅಂಪೈರ್ ಬಳಿ ಹೋಗಿದ್ದೆ, ಸೂಪರ್ ಓವರ್ ಇದೆ ಎಂಬುದು ನನಗೆ ತಿಳಿದಿರಲಿಲ್ಲ. ಏಕದಿನ ಪಂದ್ಯದಲ್ಲಿ ನೂರು ಓವರ್ ಆಟ ಇರುತ್ತದೆ. ಆಟ ಮುಗಿದ ಬಳಿಕ ಪಂದ್ಯ ಟೈ ಆದರೆ ಅದು ಕೆಟ್ಟ ಫಲಿತಾಂಶ ಆಗುವುದಿಲ್ಲ ಎಂದರು.
ಕಿವಿಸ್ ತಂಡ ಸೂಪರ್ ಓವರ್ನಲ್ಲಿ ಆಡಿರುವ 8 ಪಂದ್ಯಗಳಲ್ಲಿ 7 ರಲ್ಲಿ ಸೋತಿದೆ. ಹಾಗಾಗಿ ನಾವೂ ಸೂಪರ್ ಓವರ್ ಪರಿಣಿತರಲ್ಲ ಎಂದು ರಾಸ್ ಟೇಲರ್ ಹೇಳಿದ್ದಾರೆ.