ಢಾಕಾ: ಭ್ರಷ್ಟಾಚಾರಕ್ಕೆ ಬುಕ್ಕಿಗಳಿಂದ ಬಂದಿದ್ದ ಕರೆಯನ್ನು ಐಸಿಸಿಗೆ ವರದಿ ಮಾಡದೆ ಮುಚ್ಚಿಟ್ಟಿದ್ದರಿಂದ ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ ವರ್ಷದ ಕೊನೆಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಬಾಂಗ್ಲಾ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಶಕಿಬ್ ಅವರ ನಿಷೇಧದ ಅವಧಿ ಅಕ್ಟೋಬರ್ 29ಕ್ಕೆ ಕೊನೆಗೊಳ್ಳಲಿದೆ. ಅವರು ಶ್ರೀಲಂಕಾ ವಿರುದ್ಧ ಇನ್ನೂ ವೇಳಾಪಟ್ಟಿ ದೃಢಪಡದ 3 ಪಂದ್ಯಗಳ ಪ್ರಸ್ತಾವಿತ ಟಿ-20 ಸರಣಿಯಲ್ಲಿ ಕಾಣಿಸಿಕೊಳ್ಳಬಹುದು ಎಂದು ತಿಳಿದು ಬಂದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಭಾರತೀಯ ಬುಕ್ಕಿಯೊಬ್ಬ ಮ್ಯಾಚ್ ಫಿಕ್ಸಿಂಗ್ಗಾಗಿ ಸಂಪರ್ಕಿಸಿದ್ದ ವಿಷಯವನ್ನು ಶಕಿಬ್ ವರದಿ ಮಾಡುವಲ್ಲಿ ವಿಫಲರಾದ ಹಿನ್ನೆಲೆ ಅವರನ್ನು 2 ವರ್ಷಗಳ ಕಾಲ ನಿಷೇಧ ಮಾಡಲಾಗಿತ್ತು. ಅದರಲ್ಲಿ ಅವರು ವಿಚಾರಣೆಗೆ ಬೆಂಬಲ ನೀಡಿದ್ದರಿಂದ ಒಂದು ವರ್ಷದ ಶಿಕ್ಷೆಯನ್ನು ಕಡಿತಗೊಳಿಸಲಾಗಿತ್ತು.
ಶಕಿಬ್ ಒಂದು ವರ್ಷದಿಂದ ಹೊರಗುಳಿದಿರುವುದು ಆರು ಆಥವಾ ಏಳು ತಿಂಗಳ ಕಾಲ ಕೋವಿಡ್-19ನಿಂದ ಹೊರಗುಳಿದಿರುವ ಉಳಿದ ಆಟಗಾರರಿಗಿಂತ ಹೆಚ್ಚು ಭಿನ್ನವಾಗಿಲ್ಲ ಎಂದು ಬಾಂಗ್ಲಾ ತಂಡದ ಮುಖ್ಯ ಕೋಚ್ ರಸೆಲ್ ಡೊಮಿಂಗೊ ಹೇಳಿದ್ದಾರೆ. ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆಂದು ನಾವು ಭಾವಿಸುತ್ತೇವೆ. ನಿಸ್ಸಂಶಯವಾಗಿ ಎಲ್ಲಾ ಆಟಗಾರರು ಫಿಟ್ನೆಸ್ ಮಟ್ಟಕ್ಕೆ ಸಂಬಂಧಿಸಿದಂತೆ ಕೆಲವು ಮಾನದಂಡಗಳಿಗೆ ಒಳಗಾಗಬೇಕಿದೆ ಎಂದು ತಿಳಿಸಿದ್ದಾರೆ.
ಯಾವುದೇ ವಿಧದ ಕ್ರಿಕೆಟ್ ಆಟದೆ ನೇರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವುದು ಕಷ್ಟಕರವಾಗಿದೆ. ನನ್ನ ಪ್ರಕಾರ ಶಕಿಬ್ಗೆ ಕೆಲವು ಪಂದ್ಯಗಳಲ್ಲಿ ಆಡುವ ಅವಕಾಶಗಳನ್ನು ಮಾಡಿಕೊಡಬೇಕಿದೆ. ಆತ ವಿಶ್ವದರ್ಜೆಯ ಆಟಗಾರ. ತಂಡಕ್ಕೆ ಆದಷ್ಟು ಬೇಗ ಮರಳಲಿದ್ದಾರೆ ಎಂಬುದನ್ನು ನಾನು ಖಾತ್ರಿಪಡಿಸುತ್ತೇನೆ. ಆದರೆ ಇದೆಲ್ಲಾ ಸಾಧ್ಯವಾಗಬೇಕೆಂದರೆ ಫಿಟ್ನೆಸ್ ಬಹಳ ಮುಖ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 24ರಂದು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಟೆಸ್ಟ್ ಸರಣಿಗಾಗಿ ಮಾತುಕತೆ ನಡೆಸಲಿವೆ ಎಂದು ತಿಳಿದು ಬಂದಿದೆ. ಆದರೆ ಎರಡು ಅಥವಾ ಮೂರು ಪಂದ್ಯಗಳ ಟೆಸ್ಟ್ ಸರಣಿ ಅಯೋಜಿಸಬೇಕೇ ಎಂಬುದು ಇನ್ನೂ ಚರ್ಚೆಯಲ್ಲಿದೆ. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟೆಸ್ಟ್ ಸರಣಿಯ ನಂತರ 3 ಪಂದ್ಯಗಳ ಟಿ-20 ಸರಣಿಯನ್ನು ಪ್ರವಾಸದಲ್ಲಿ ಸೇರಿಸಿಕೊಳ್ಳುವಂತೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.