ಲಂಡನ್: ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮಣಿಸುವ ಸಾಮರ್ಥ್ಯ ಬಾಂಗ್ಲಾದೇಶಕ್ಕಿದೆ ಎಂದು ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2019ರಲ್ಲಿ ಆಶ್ಚರ್ಯಕರ ಪ್ರದರ್ಶನ ತೋರುತ್ತಿರುವ ಬಾಂಗ್ಲದೇಶ ತಂಡ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳಿಗೆ ಸೋಲುಣಿಸಿ ಸೆಮಿಫೈನಲ್ನತ್ತ ಕಣ್ಣಿಟ್ಟಿದೆ. ತನ್ನ ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸುತ್ತಿದ್ದು, ಪಂದ್ಯಕ್ಕೂ ಮುನ್ನವೇ ತಂಡದ ಆಲ್ರೌಂಡರ್ ಆದ ಶಕೀಬ್ ಕೊಹ್ಲಿ ಪಡೆಯನ್ನು ಮಣಿಸುವ ತಾಕತ್ತು ನಮಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಟೀಂ ಇಂಡಿಯಾ ವಿಶ್ವದಲ್ಲಿ ಬಲಿಷ್ಠ ತಂಡ. ವಿಶ್ವದರ್ಜೆಯ ಅನುಭವಿ ಬ್ಯಾಟ್ಸ್ಮನ್ಗಳು, ಬೌಲರ್ಗಳನ್ನು ಹೊಂದಿದೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಮೊದಲ ಸ್ಥಾನದಲ್ಲಿದೆ. ನಮಗೆ ಕೊಹ್ಲಿ ಬಳಗವನ್ನು ಸೋಲಿಸುವುದು ಸುಲಭವಲ್ಲ. ಆದರೆ ಸೋಲಿಸಲು ನಾವು ನಮ್ಮ ಕೈಲಾದಷ್ಟು ಹೋರಾಟ ಮಾಡುತ್ತೇವೆ ಎಂದು ಶಕೀಬ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ಆಲ್ರೌಂಡರ್ ಆಗಿರುವ ಶಕೀಬ್ 2019ರ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ 3 ಅರ್ಧಶತಕ ಹಾಗೂ 2 ಶತಕ ಸಹಿತ 476 ರನ್ ಸಿಡಿಸಿದ್ದಾರೆ. ಬೌಲಿಂಗ್ನಲ್ಲಿ 10 ವಿಕೆಟ್ ಪಡೆದಿದ್ದಾರೆ.
ಬಾಂಗ್ಲಾದೇಶ ಕೊಹ್ಲಿ ಬಳಗವನ್ನು ಮಣಿಸುವ ಅವಕಾಶ ತುಂಬಾ ಕಡಿಮೆ ಇದ್ದರೂ ಬಾಂಗ್ಲಾವನ್ನು ಕಡೆಗಣಸುವ ಹಾಗಿಲ್ಲ. 2007ರಲ್ಲಿ ಭಾರತ ತಂಡ ಲೀಗ್ನಲ್ಲೇ ಹೊರಹೋಗುವಂತೆ ಮಾಡಿದ್ದು ಇದೇ ಬಾಂಗ್ಲಾದೇಶ ತಂಡ ಎಂಬುದನ್ನು ಮರೆಯುವಂತಿಲ್ಲ. ಬಾಂಗ್ಲಾದೇಶ 7 ಪಂದ್ಯಗಳಲ್ಲಿ 7 ಅಂಕ ಪಡೆದಿದ್ದು, ಅಂಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಮುಷ್ರಫೆ ಪಡೆ ಲೀಗ್ನಲ್ಲಿ 3 ಗೆಲುವು, 3 ಸೋಲು ಕಂಡಿದ್ದರೆ, ಒಂದು ಪಂದ್ಯ ಮಳೆಗಾಹುತಿಯಾಗಿತ್ತು.