ಡಾಕಾ: ಬಾಂಗ್ಲಾದೇಶ ಟೆಸ್ಟ್ ಮತ್ತು ಟಿ-20 ತಂಡದ ನಾಯಕ ಶಕಿಬ್ ಅಲ್ ಹಸನ್ ಐಸಿಸಿಯಿಂದ 18 ತಿಂಗಳು ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ.
ಬಾಂಗ್ಲಾದೇಶದ ಟಾಪ್ ಪ್ಲೇಯರ್ ಆಗಿರುವ ಶಕಿಬ್ ಐಸಿಸಿ ಸೂಚನೆ ಮೇರೆಗೆ ಭಾರತ ವಿರುದ್ಧದ ಅಭ್ಯಾಸದಿಂದ ಹೊರಗುಳಿದಿದ್ದರು. ಇದೀಗ ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಬುಕ್ಕಿಗಳಿಂದ ಬಂದಿದ್ದ ಫಿಕ್ಸಿಂಗ್ ಆಫರ್ ವಿಚಾರವನ್ನು ಐಸಿಸಿಗೆ ವರದಿ ಮಾಡದೇ ಮುಚ್ಚಿಟ್ಟ ಆರೋಪದ ಮೇರೆಗೆ ನಿಷೇಧದ ಭೀತಿಗೊಳಗಾಗಿದ್ದಾರೆ.
ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ಸಮಕಲ್ ವರದಿಯಂತೆ ಐಸಿಸಿ ಬಿಸಿಬಿಗೆ ನೀಡಿದ ಸೂಚನೆ ಮೇರೆಗೆ ಶಕಿಬ್ ಅವರು ಅಭ್ಯಾಸದಿಂದ ದೂರ ಉಳಿದಿದ್ದಾರೆ. ಶಕಿಬ್ಗೆ ಎರಡು ವರ್ಷದ ಹಿಂದೆ ಬುಕ್ಕಿಯಿಂದ ಆಫರ್ ಬಂದಿದ್ದ ವಿಚಾರವನ್ನು ಅಲ್ಲಿನ ಪತ್ರಿಕೆಗಳು ವರದಿ ಮಾಡಿದ್ದವು. ಆದರೆ, ಈ ವಿಚಾರವನ್ನು ಶಕಿಬ್ ಐಸಿಸಿಯ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕಕ್ಕೆ ವರದಿ ಮಾಡದಿರುವುದರಿಂದ ಐಸಿಸಿಯಿಂದ ನಿಷೇಧಕ್ಕೊಳಗಾಗುವ ಭಯದಲ್ಲಿದ್ದಾರೆ. ಶಕಿಬ್ ಎಸಿಎಸ್ಯು (ಆ್ಯಂಟಿ ಕರಪ್ಷನ್ ಅಂಡ್ ಸೆಕ್ಯುರಿಟಿ ಯೂನಿಟ್) ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಐಸಿಸಿ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಶಕಿಬ್ ಬಾಂಗ್ಲಾದೇಶ ಟೆಸ್ಟ್ ಮತ್ತು ಟಿ-20 ತಂಡದ ನಾಯಕನಾಗಿದ್ದು, ಇದೀಗ ಭಾರತ ಪ್ರವಾಸದಿಂದ ಹೊರಬಿದ್ದಿದ್ದು, ಟೆಸ್ಟ್ ತಂಡವನ್ನು ಹಿರಿಯ ವಿಕೆಟ್ ಕೀಪರ್ ರಹೀಮ್ ಹಾಗೂ ಟಿ -20 ತಂಡವನ್ನು ಮೊಸದ್ದೀಕ್ ಹುಸೇನ್ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ನವೆಂಬರ್ 3 ರಿಂದ ಟಿ20 ಸರಣಿ ಹಾಗೂ ನವೆಂಬರ್ 14 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.