ಹೈದರಾಬಾದ್: ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಚೀನಾದ ಪ್ರಾಯೋಜಕರೊಂದಿಗಿನ ಸಂಬಂಧವನ್ನು ಕಡಿತಗೊಳಿಸದಿರುವ ಬಗ್ಗೆ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಸ್ಮಾರ್ಟ್ಫೋನ್ ತಯಾರಕ ಕಂಪನಿ ವಿವೋ ಇಂಡಿಯನ್ ಪ್ರೀಮಿಯರ್ ಲೀಗ್ನ ಶೀರ್ಷಿಕೆ ಪ್ರಾಯೋಜಕತ್ವದಿಂದ ದೂರ ಉಳಿದಿದೆ ಎನ್ನಲಾಗಿದೆ.
ಭಾರತೀಯ ಕ್ರಿಕೆಟ್‌ನಲ್ಲಿನ ಹೊಸ ಬೆಳವಣಿಗೆಯನ್ನು ಅನೇಕ ಮಾಧ್ಯಮ ವರದಿಗಳು ದೃಢಪಡಿಸಿದ್ದು, ಇದು ಬಿಸಿಸಿಐಗೆ ದೊಡ್ಡ ಆರ್ಥಿಕ ಹಿನ್ನಡೆಯಾಗಿದೆ. 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ದುಬೈನಲ್ಲಿ ನಡೆಯಲಿದ್ದ, ಟೂರ್ನಿ ಪ್ರಾರಂಭಕ್ಕೆ ಕೇವಲ ಒಂದು ತಿಂಗಳು ಸಮಯವಿದೆ.
ಪ್ರಸ್ತುತ ಬೆಳವಣಿಗೆಯ ಕುತೂಹಲಕಾರಿ ಸಂಗತಿಯೆಂದರೆ, ಚೀನಾದ ಕಂಪನಿಯೊಂದಿಗಿನ ತನ್ನ ಸಂಬಂಧವನ್ನು ಉಳಿಸಿಕೊಳ್ಳುವುದಾಗಿ ಬಿಸಿಸಿಐ ಹೇಳಿತ್ತು. ಆದರೆ, ವಿವೋ ಕಂಪನಿಯೇ ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಆದರೆ, ಬಿಸಿಸಿಐ ಮತ್ತು ವಿವೋ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ವಿವೋ ಇನ್ನೂ ಬಿಸಿಸಿಐನೊಂದಿಗೆ 1,320 ಕೋಟಿ ರೂ.ಗಳ ಮೂರು ವರ್ಷಗಳ ಪ್ರಾಯೋಜಕತ್ವದ ಒಪ್ಪಂದವನ್ನು ಹೊಂದಿದೆ. 2021 ರಿಂದ 2023 ರವರೆಗೆ ಟಿ - 20 ಪಂದ್ಯಾವಳಿಗೆ ಶೀರ್ಷಿಕೆ ಪ್ರಾಯೋಜಕರಾಗಿ ಮರಳಿ ಬರುವ ಸಾಧ್ಯತೆಯಿದೆ.
ವಿವೋ 2018 ರಿಂದ ಐದು ವರ್ಷಗಳ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದದ ನಿಮಿತ್ತ ಬಿಸಿಸಿಐಗೆ ವಾರ್ಷಿಕವಾಗಿ 440 ಕೋಟಿ ರೂ. ಪಾವತಿಸುತ್ತಿತ್ತು. ಪ್ರಾಯೋಜಕತ್ವದ ಹೊರತಾಗಿ ಸುಮಾರು 150 ಕೋಟಿ ರೂ. ಹಣವನ್ನು ದೂರದರ್ಶನ ಜಾಹೀರಾತುಗಳಿಗಾಗಿ ವಿವೋ ಖರ್ಚು ಮಾಡಿದೆ.