ಢಾಕಾ: ಬಾಂಗ್ಲಾದೇಶದ ಟಿ-20 ತಂಡದ ನಾಯಕ ಮಹ್ಮದುಲ್ಲಾ, ಸಚಿನ್ ತೆಂಡೂಲ್ಕರ್ 13 ವರ್ಷಗಳ ಹಿಂದೆ ಮಾಡಿದ ಸಹಾಯವನ್ನು ನೆನೆದು ಧನ್ಯವಾದ ತಿಳಿಸಿದ್ದಾರೆ.
ವಿಶ್ವೆದೆಲ್ಲೆಡೆ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ವಿಶ್ವದ ಗ್ರೇಟೆಸ್ಟ್ ಬ್ಯಾಟ್ಸ್ಮನ್. ಕ್ರಿಕೆಟ್ ಹೊರತಾಗಿಯೂ ಮಾನವೀಯ ಮೌಲ್ಯವುಳ್ಳ ವ್ಯಕ್ತಿ ಕೂಡ ಆಗಿದ್ದಾರೆ. ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರರ್ ಆಗಿದ್ದಾರೆ.
ಸಚಿನ್ ತೆಂಡೂಲ್ಕರ್ ಸಾವಿರಾರು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ವಿರೋಧಿ ತಂಡದ ಆಟಗಾರರೂ ಕೂಡ ಸಚಿನ್ ನಡತೆಯನ್ನು ಕಂಡು ಗೌರವ ನೀಡುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ.
ಇತ್ತೀಚೆಗೆ ಬಾಂಗ್ಲಾದೇಶದ ಟಿ-20 ತಂಡದ ನಾಯಕ ಮಹ್ಮದುಲ್ಲಾ ರಿಯಾದ್ ಸಚಿನ್ ಮಾಡಿದ್ದ ಸಹಾಯವನ್ನು ನೆನೆದಿದ್ದಾರೆ. ಕ್ರಿಕ್ಬಜ್ ನಡೆಸಿದ ಆನ್ಲೈನ್ ಸಂವಾದದಲ್ಲಿ ಅಡಿಡಾಸ್ ಕಂಪನಿಯಿಂದ ಬ್ಯಾಟ್ ಸ್ಪಾನ್ಸರ್ಶಿಪ್ ಕೊಡಿಸಿದ್ದ ವಿಚಾರವನ್ನು ಮಹ್ಮದುಲ್ಲಾ ನೆನೆದು ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ.
ಬ್ಯಾಟ್ ಇಲ್ಲದೆ ಪರದಾಡುತ್ತಿದ್ದ ನನಗೆ ಸಚಿನ್ ಅಡಿಡಾಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಟ್ಟು ಬ್ಯಾಟ್ ಸ್ಪಾನ್ಸರ್ ಕೊಡಿಸಿದ್ದರು. ಅವರ ಗುಣಕ್ಕೆ ಎಷ್ಟು ಧನ್ಯವಾದ ತಿಳಿಸಿದರೂ ಸಾಲುವುದಿಲ್ಲ ಎಂದಿದ್ದಾರೆ.
ಮಹ್ಮದುಲ್ಲಾ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಬಹುದೊಡ್ಡ ಅಭಿಮಾನಿ ಎಂದು ತಿಳಿಸಿದ್ದಾರೆ. ಧೋನಿ ನನ್ನ ಕ್ರಿಕೆಟ್ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅವರ ಆಟವನ್ನು ಟಿವಿಯಲ್ಲಿ ನೋಡುತ್ತಿರುತ್ತೇನೆ. ಕೆಲವೊಮ್ಮೆ ಲೈವ್ನಲ್ಲೂ ನೋಡಿದ್ದೇನೆ. ಏಕದಿನ ಕ್ರಿಕೆಟ್ನಲ್ಲಿ 50 ಸರಾಸರಿ ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನಾನು ಅವರಿಂದ ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.