ಮುಂಬೈ: ಜನವರಿಯಿಂದ ಶ್ರೀಲಂಕಾ ವಿರುದ್ಧದ ಟಿ-20 ಸರಣಿಗೂ ಮುನ್ನ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
2019ರಲ್ಲಿ ಸುದೀರ್ಘ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಅವರನ್ನು ಜನವರಿ ಕೊನೆ ವಾರದಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ ಎಂದು ತಿಳಿದುಬಂದಿದೆ.
ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿ ವೇಳೆ ಮಂಡಿ ನೋವಿಗೆ ತುತ್ತಾಗಿದ್ದ ಶಿಖರ್ ಧವನ್ ಚೇತರಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಜೊತೆ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಗೆ ಡಿಸೆಂಬರ್ 26ರಂದು ತಂಡದ ಆಯ್ಕೆ ನಡೆಯಲಿದೆ ಎನ್ನಲಾಗಿದೆ. ಜನವರಿ 5ರಂದು ಮೊದಲ ಟಿ-20 ಪಂದ್ಯ ಗುವಾಹಟಿಯಲ್ಲಿ, ಜನವರಿ 7ರಂದು 2ನೇ ಪಂದ್ಯ ಇಂದೋರ್ನಲ್ಲಿ ಹಾಗೂ ಮೂರನೇ ಪಂದ್ಯ ಜನವರಿ 10ರಂದು ಪುಣೆಯಲ್ಲಿ ನಡೆಯಲಿದೆ.
ಇನ್ನು ರೋಹಿತ್ ಮತ್ತೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಇಂತಹ ಟಿ-20 ಸರಣಿಗಳಿಗೆ ಯಾವುದೇ ಆಟಗಾರನಿಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡುವುದಿಲ್ಲ. ಆದರೆ, ಸ್ವತಃ ರೋಹಿತ್ ಶರ್ಮಾ ಅವರೇ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಿಂದ ವಿಶ್ರಾಂತಿ ಬಯಸಿದ್ದಾರೆ ಎಂದು ತಿಳಿದುಬಂದಿದೆ.