ವಿಶಾಖಪಟ್ಟಣ: ದಕ್ಷಿಣ ಆಫ್ರಿಕಾ ವಿರುದ್ಧ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಬ್ಬರದ ಶತಕ ದಾಖಲಿಸುವುದರ ಜೊತೆಗೆ ಟೆಸ್ಟ್ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ರ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಇದೇ ಮೊದಲ ಬಾರಿಗೆ ಇನ್ನಿಂಗ್ಸ್ ಆರಂಭಿಸುತ್ತಿರುವ ರೋಹಿತ್ ಶರ್ಮಾ(115), ಮೊದಲ ದಿನವೇ ಕನ್ನಡಿಗ ಮಯಾಂಕ್ ಅಗರ್ವಾಲ್(84) ಜೊತೆಗೂಡಿ 202 ರನ್ಗಳ ಜೊತೆಯಾಟ ನೀಡಿದ್ದಲ್ಲದೆ ಆರಂಭಿಕರಾಗಿ ಆಡಿದ ಮೊದಲ ಇನ್ನಿಂಗ್ಸ್ನಲ್ಲೇ ಆಕರ್ಷಕ ಶತಕ ದಾಖಲಿಸಿದ್ದಲ್ಲದೆ ಕೆಲವು ದಾಖಲೆಗಳನ್ನು ಬರೆದಿದ್ದಾರೆ.
ಈ ಶತಕದಿಂದ ಟೆಸ್ಟ್ ಕ್ರಿಕೆಟ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಡಾನ್ ಬ್ರಾಡ್ಮನ್ರ ಸರಾಸರಿ ದಾಖಲೆಯನ್ನು ರೋಹಿತ್ ಸರಿಗಟ್ಟಿದ್ದಾರೆ. ತವರಿನಲ್ಲಿ ರೋಹಿತ್ (15) 10ಕ್ಕಿಂತ ಹೆಚ್ಚು ಇನ್ನಿಂಗ್ಸ್ ಆಡಿ ಹೆಚ್ಚು ಸರಾಸರಿ ಹೊಂದಿರುವ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಬ್ರಾಡ್ಮನ್ರೊಂದಿಗೆ ಹಂಚಿಕೊಂಡಿದ್ದಾರೆ.
ಬ್ರಾಡ್ಮನ್ ತವರಿನಲ್ಲಿ ಆಡಿರುವ 50 ಇನ್ನಿಂಗ್ಸ್ನಲ್ಲಿ 98.22 ಸರಾಸರಿ ರನ್ ಗಳಿಸಿದ್ದಾರೆ. ಸದ್ಯ ರೋಹಿತ್ 15 ಇನ್ನಿಂಗ್ಸ್ಗಳಲ್ಲಿ 98.22 ಸರಾಸರಿಯಲ್ಲಿ 4 ಶತಕ, 5 ಅರ್ಧಶತಕ ಸಹಿತ 884 ರನ್ ಗಳಿಸುವ ಮೂಲಕ ಬ್ರಾಡ್ಮನ್ರನ್ನು ಸರಿಗಟ್ಟಿದ್ದಾರೆ.
ಇದರ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ 4ನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು. ಇವರಿಗಿಂತ ಮೊದಲು ಕನ್ನಡಿಗ ರಾಹುಲ್, ಶಿಖರ್ ಧವನ್ ಹಾಗೂ ಪ್ರಥ್ವಿ ಶಾ ಮೊದಲ ಕ್ರಮಾಂಕದಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು.
ರೋಹಿತ್ ಶರ್ಮಾ ಎಲ್ಲಾ ಮಾದರಿಯಲ್ಲಿ ಆರಂಭಿಕನಾಗಿ ಶತಕ ಸಿಡಿಸಿದ ವಿಶ್ವದ 7ನೇ ಹಾಗೂ ಭಾರತದ ಮೊದಲನೇ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ. ಕ್ರಿಸ್ ಗೇಲ್, ಮೆಕ್ಕಲಮ್, ಮಾರ್ಟಿನ್ ಗಟ್ಪಿಲ್, ತಿಲಕರತ್ನೆ ದಿಲ್ಶನ್, ಅಹ್ಮದ್ ಶೆಹ್ಜಾದ್, ಶೇನ್ ವಾಟ್ಸ್ನ್ ಹಾಗೂ ತಮೀಮ್ ಇಕ್ಬಾಲ್ ಕೂಡ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಶತಕ ದಾಖಲಿಸಿದ್ದಾರೆ.