ಮುಂಬೈ: ಮಂಗಳವಾರದಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ರಾಹುಲ್, ಧವನ್ ಹಾಗೂ ರೋಹಿತ್ ಶರ್ಮಾ ಮೂವರು ಆಡಲಿದ್ದಾರೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಗಾಯದಿಂದ ಚೇತರಿಸಿಕೊಂಡಿದ್ದ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದಾರೆ. ಇನ್ನು ರಾಹುಲ್ ಕಳೆದ ಎರಡು ಮೂರು ಸರಣಿಗಳಲ್ಲಿ ಧವನ್- ರೋಹಿತ್ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ರೋಹಿತ್-ಧವನ್ ಇಬ್ಬರೂ ತಂಡಕ್ಕೆ ಆಗಮಿಸಿರುವುದರಿಂದ ರಾಹುಲ್ ತಂಡದಿಂದ ಹೊರಬೀಳಬಹುದು ಎಂಬ ಗೊಂದಲಕ್ಕೆ ಕೊಹ್ಲಿ ತೆರೆ ಎಳೆದಿದ್ದು ತಾವೇ 3ನೇ ಕ್ರಮಾಂಕವನ್ನು ಬಿಟ್ಟುಕೊಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
" ಫಾರ್ಮ್ನಲ್ಲಿರುವ ಒಬ್ಬ ಆಟಗಾರ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾನೆಂದರೆ, ಅಂತಹ ಆಟಗಾರರನ್ನು ನೀವು ಖಂಡಿತ ತಂಡದಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ ಹಾಗೂ ತಂಡಕ್ಕೆ ಅಗತ್ಯವಾದ ಸಂಯೋಜನೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ ಆ ಮೂವರು(ರೋಹಿತ್, ಧವನ್, ರಾಹುಲ್)ಮುಂದಿನ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇದೆ. ಅಲ್ಲದೆ ಮೂವರು ಆಡುವುದರಿಂದ ಮೈದಾನದಲ್ಲಿನ ಸಮತೋಲನೆ ಯಾವ ರೀತಿ ಇರಲಿದೆ ಎಂಬುದೇ ಆಸಕ್ತಿಕರವಾಗಿರಲಿದೆ" ಎಂದು ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವೈಟ್ಬಾಲ್ ಕ್ರಿಕೆಟ್ನಲ್ಲಿ ಆರಂಭಿಕ ಸ್ಥಾನಕ್ಕೆ ಪ್ರಬಲ ಪೈಪೋಟಿ ಕಂಡುಬರುತ್ತಿದೆ. ರೋಹಿತ್ ಶರ್ಮಾ 2019ರಲ್ಲಿ ಆರಂಭಿಕನಾಗಿ 2442 ಅಂತಾರಾಷ್ಟ್ರೀಯ ರನ್ಗಳಿಸಿದ್ದಾರೆ. ಇನ್ನು ಟಿ20ಯಲ್ಲಿ ರಾಹುಲ್ 44.17 ಸರಾಸರಿಯೊಂದಿಗೆ ರನ್ಗಳಿಸುತ್ತಿದ್ದು ಧವನ್ರನ್ನು ಹಿಂದಿಕ್ಕಿದ್ದಾರೆ. ಆದರೆ ಧವನ್ ಕಳೆದ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ 2 ಪಂದ್ಯಗಳಲ್ಲಿ ಕ್ರಮವಾಗಿ 32 ಹಾಗೂ 52 ರನ್ಗಳಿಸಿ ಸರಣಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.
ಇದೀಗ ಯಾರನ್ನು ತಂಡದಿಂದ ಬಿಡಲಾಗದ ಸ್ಥಿತಿಯಲ್ಲಿರುವ ಕೊಹ್ಲಿ ಆ ಮೂವರನ್ನು ಮೊದಲ 3 ಕ್ರಮಾಂಕದಲ್ಲಿ ಆಡಿಸಲು ತೀರ್ಮಾನಿಸಿದ್ದಾರೆ." ನನಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಕ್ಕೆ ಬಹಳ ಖುಷಿಯಿದೆ. 3ನೇ ಕ್ರಮಾಂಕವೇ ಬೇಕೆಂಬ ಆಸೆಯಿಲ್ಲ. ಬ್ಯಾಟಿಂಗ್ ಮಾಡಲು ಕ್ರಮಾಂಕ ಸರಿಯಿಲ್ಲ ಎಂಬ ಭಾವನೆ ನನಗಿಲ್ಲ" ಎಂದು ಕೊಹ್ಲಿ ತಿಳಿಸಿದ್ದಾರೆ.
ನಾನೊಬ್ಬ ನಾಯಕನಾಗಿ ಭವಿಷ್ಯದ ತಮ್ಮ ಸ್ಥಾನಕ್ಕೆ ಮತ್ತೊಬ್ಬನನ್ನು ಸಿದ್ಧಪಡಿಸುವುದು ನನ್ನ ಕೆಲಸವಾಗಿದೆ. ಬಹಳಷ್ಟು ಜನರು ಈ ರೀತಿ ಆಲೋಚನೆ ಮಾಡದಿರಬಹುದು. ಆದre ನಾಯಕನಾಗಿ ನಿಮ್ಮ ನಂತರ ಸುಭದ್ರ ತಂಡವನ್ನು ಸಿದ್ದಪಡಿಸಿ ನೀವು ನಿರ್ಗಮಿಸಬೇಕಾಗುತ್ತದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.