ಲಂಡನ್: ರಿಷಭ್ ಪಂತ್ ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಳ್ಳುವ ಕನಸು ಕೊನೆಗೂ ನನಸಾಗಿದೆ. ವಿಶ್ವಕಪ್ನಿಂದ ಶಿಖರ್ ಧವನ್ ಹೊರಬಿದ್ದಿದ್ದು ಖಚಿತವಾಗುತ್ತಿದ್ದಂತೆ ತಂಡವನ್ನ ರಿಷಭ್ ಪಂತ್ ಸೇರಿಕೊಂಡಿದ್ದು, ಇದೀಗ ಅವರಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.
ತಂಡ ವಿಶ್ವಕಪ್ನಲ್ಲಿ ಈಗಾಗಲೇ ಅದ್ಭುತ ಪ್ರದರ್ಶನ ನೀಡುತ್ತಿದೆ. ಶಿಖರ್ ಧವನ್ ಅನುಪಸ್ಥಿತಿಯಲ್ಲೇ ಪಾಕ್ ವಿರುದ್ಧ ಅಬ್ಬರಿಸಿದ್ದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿತ್ತು. ಗಬ್ಬರ್ ಸಿಂಗ್ ಸ್ಥಾನಕ್ಕೆ ಆರಂಭಿಕರಾಗಿ ಕೆ.ಎಲ್. ರಾಹುಲ್ ಹಾಗೂ 4ನೇ ಕ್ರಮಾಂಕದಲ್ಲಿ ವಿಜಯ್ ಶಂಕರ್ ಅವಕಾಶ ಪಡೆದುಕೊಂಡು ತಮ್ಮ ಸಾಮರ್ಥ್ಯ ಸಾಬೀತು ಪಡೆಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಅವರು ಅವಕಾಶ ಪಡೆದುಕೊಳ್ಳುವುದು ಕನ್ಫರ್ಮ್ ಆಗಿದೆ.
ಇದರ ಮಧ್ಯೆ ಈಗಾಗಲೇ ವಿಶ್ವಕಪ್ಗಾಗಿ ಸ್ಥಾನ ಪಡೆದುಕೊಂಡು, ಹೊರಗಡೆ ಇರುವ ದಿನೇಶ್ ಕಾರ್ತಿಕ್ ಹಾಗೂ ರವೀಂದ್ರ ಜಡೇಜಾ ಕೂಡ ಅದ್ಭುತ ಆಟಗಾರರಾಗಿದ್ದು, ಇವರ ಜತೆ ರಿಷಭ್ ಫೈಟ್ ನಡೆಸಬೇಕಾಗಿದೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಬಲ್ಲ ರಿಷಭ್, ಚುಟುಕು ಮಾದರಿ ಕ್ರಿಕೆಟ್ಗೆ ಹೇಳಿ ಮಾಡಿಸಿರುವ ಆಟಗಾರ. ಆದರೆ, ಏಕದಿನ ಪಂದ್ಯದಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಹಾಗೂ ವಿಶ್ವಕಪ್ನಂತಹ ಮೆಗಾ ಟೂರ್ನಿಗಳಲ್ಲಿ ಯಾವ ರೀತಿಯಾಗಿ ರನ್ಗಳಿಕೆ ಮಾಡಬಲ್ಲರು ಎಂಬುದು ಪ್ರಮುಖವಾಗುತ್ತದೆ.
ಐಪಿಎಲ್ನಲ್ಲಿ ಮಿಂಚಿರುವ ರಿಷಭ್ ಪಂತ್, ಈಗಾಗಲೇ ಟೀಂ ಇಂಡಿಯಾ ಪರ 5 ಏಕದಿನ ಪಂದ್ಯಗಳನ್ನಾಡಿದ್ದು ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. ಹೀಗಾಗಿ ಅವರಿಗೆ ಚಾನ್ಸ್ ಸಿಗುವುದು ಸ್ವಲ್ಪ ಕಷ್ಟವೇ ಸಾಧ್ಯ.