ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಬೆಂಬಲಕ್ಕೆ ನಿಂತಿದ್ದಾರೆ. ಪಂತ್ ಮೇಲೆ ಒತ್ತಡ ಹೇರಬಾರದು. ಸಹಜ ಶೈಲಿಯಲ್ಲೇ ಬ್ಯಾಟಿಂಗ್ ಮಾಡಲು ಅವಕಾಶ ನೀಡಿ ಎಂದು ಯುವಿ ಹೇಳಿದ್ದಾರೆ.
ಇತ್ತೀಚೆಗೆ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ರಿಷಬ್ ಪ್ರದರ್ಶನದ ಬಗ್ಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ. ಮುಂದಿನ ವರ್ಷ ಟಿ-20 ವಿಶ್ವಕಪ್ ಟೂರ್ನಿ ಕೂಡ ಇರುವುದರಿಂದ, nಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬದಲಿಗೆ ಪಂತ್ಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಆದರೆ, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಪಂತ್ ವಿಫಲರಾಗುತ್ತಿದ್ದಾರೆ ಎಂಬ ಮಾತು ಕೇಳಿಬಂದಿದ್ದವು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್, ಯುವ ಆಟಗಾರ ರಿಷಬ್ ಪಂತ್ರನ್ನು ಎಂ ಎಸ್ ಧೋನಿಗೆ ಹೋಲಿಸಿ ಮಾತನಾಡಲು ಸಾಧ್ಯವಿಲ್ಲ. ಒಂದೇ ದಿನದಲ್ಲಿ ಯಾರಿಗೂ ಕೂಡ ಯಶಸ್ಸು ಸಿಗುವುದಿಲ್ಲ. ಧೋನಿ ಇಂದು ವಿಶ್ವಮಟ್ಟದಲ್ಲಿ ಬೆಳೆದಿದ್ದಾರೆಂದರೆ, ಅದರ ಹಿಂದೆ ತುಂಬಾ ದಿನಗಳ ಶ್ರಮ ಅಡಗಿದೆ. ಇನ್ನೂ ಕೂಡ ಟಿ-20 ವಿಶ್ವಕಪ್ ಟೂರ್ನಿಗೆ ಒಂದು ವರ್ಷಗಳ ಅವಕಾಶವಿದೆ ಎಂದು ಹೇಳಿದ್ದಾರೆ.
ಬಹಳ ಅವಕಾಶಗಳು ಲಭಿಸಿದರೂ ಪಂತ್ ವಿಫಲರಾಗಿರಬಹುದು. ಆದರೆ, ತಪ್ಪುಗಳನ್ನು ತಿದ್ದಿಕೊಳ್ಳಲು ಇನ್ನೂ ಅವಕಾಶವಿದೆ. ತಂಡದಲ್ಲಿ ಅದಕ್ಕಾಗಿಯೇ ಸಲಹೆ ಸೂಚನೆ ನೀಡಲು ಕೋಚ್, ನಾಯಕರೆಲ್ಲ ಇದ್ದು, ಬದಲಾವಣೆ ಸಾಧ್ಯವಿದೆ ಎಂದು ಯುವಿ ಹೇಳಿದ್ದಾರೆ.