ಚೆನ್ನೈ: ಕೋವಿಡ್ 19 ನಿಂದ ಸಂಪೂರ್ಣ ಚೇತರಿಸಿಕೊಂಡಿರುವ ದೇವದತ್ ಪಡಿಕ್ಕಲ್ 2021ರ ಐಪಿಎಲ್ನಲ್ಲಿ ತಮ್ಮ ಡೊಮೆಸ್ಟಿಕ್ ಫಾರ್ಮ್ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಡಿಕ್ಕಲ್ ಮಾರ್ಚ್ 22ರಂದು ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದರು. ನಂತರ 2 ವಾರಗಳ ಕಾಲ ಕ್ವಾರಂಟೈನ್ ಮುಗಿಸಿ 2 ಪರೀಕ್ಷೆಯಲ್ಲಿ ನೆಗೆಟಿವ್ ಪಡೆದು, ಆರ್ಸಿಬಿ ಬಳಗ ಸೇರಿಕೊಂಡಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಏಪ್ರಿಲ್ 14ರಂದು ನಡೆಯುವ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಎದುರು ನೋಡುತ್ತಿದ್ದಾರೆ.
" ಕೋವಿಡ್ 19 ಒಂದು ಹಿನ್ನಡೆಯಾಗಿದೆ, ಅದು ಮತ್ತೆ ಸಂಭವಿಸಬಾರದು ಎಂದು ನಾನು ಬಯಸುತ್ತೇನೆ. ಆದರೆ ಅದು ನನ್ನಿಂದ ನಿಯಂತ್ರಿಸಲಾಗದ ಸಂಗತಿಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಇದೀಗ ತಂಡಕ್ಕೆ ನಾನು ಪುನರಾಗಮನ ಮಾಡುವಾಗ ಸಂಪೂರ್ಣ ಫಿಟ್ ಆಗಿರುವಂತೆ ನೋಡಿಕೊಳ್ಳಬೇಕು ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದೇನೆ" ಎಂದು ಆರ್‌ಸಿಬಿಯ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಅವರು ಹೇಳಿದ್ದಾರೆ.
" ಪ್ರಸ್ತುತ ನಾನು ತುಂಬಾ ಚೆನ್ನಾಗಿದ್ದೇನೆ, ಪ್ರಮುಖವಾಗಿ ನಾನು ತಿರುಗಾಡಲು ಸಮರ್ಥನಾಗಿದ್ದೇನೆ. ನಾನು ಚೆಂಡುಗಳಿಗೆ ಪ್ರತಿಕ್ರಿಯಿಸಲು ಸಮರ್ಥನಾಗಿದ್ದೇನೆ. ಐಪಿಎಲ್ನಲ್ಲಿ ಆಡುವುದಕ್ಕೆ ಯಾವಾಗಲೂ ಸಿದ್ಧರಿರಬೇಕು. ಇಲ್ಲಿ ನಮ್ಮ ಪರಿಶ್ರಮ ಶೇ.100ರಷ್ಟಿದ್ದರೆ ಮಾತ್ರ ಮುಂದುವರಿಯಲು ಸಾಧ್ಯ" ಎಂದಿದ್ದಾರೆ.
ಸಯ್ಯದ್ ಮುಷ್ತಾಕ್ ಟ್ರೋಫಿಯಲ್ಲಿ ನಿರೀಕ್ಷಿಸಿದಷ್ಟು ಉತ್ತಮವಾಗಿರಲಿಲ್ಲ, ಅಲ್ಲಿ ನನ್ನ ಪ್ರದರ್ಶನ ಸರಾಸರಿಯಾಗಿತ್ತು. ಆದರೆ, ವಿಜಯ ಹಜಾರೆ ಟ್ರೋಫಿಯಲ್ಲಿ ನಾನು ಲಯ ಕಂಡುಕೊಂಡೆ, ನಾನು ಬ್ಯಾಟಿಂಗ್ ಮಾಡಲು ಹೊರಟಾಗಲೆಲ್ಲಾ ನನ್ನ ಆಟವನ್ನು ಉತ್ತಮಗೊಳಿಸಲು ಪ್ರಯತ್ನಿಸಿದೆ. ಇದೀಗ ಆ ಪ್ರದರ್ಶನ ನನ್ನ ಹಿಂದಿದ್ದು, ಐಪಿಎಲ್ನಲ್ಲೂ ಅದನ್ನು ಮುಂದುವರಿಸುವ ವಿಶ್ವಾಸವಿದೆ ಎಂದು ಪಡಿಕ್ಕಲ್ ತಿಳಿಸಿದ್ದಾರೆ.
20 ವರ್ಷದ ಆಟಗಾರ ವಿಜಯ್ ಹಜಾರೆ ಟ್ರೋಫಿಯಲ್ಲಿ 7 ಪಂದ್ಯಗಳಿಂದ 737 ರನ್ಗಳಿಸಿದ್ದರು. ಅವರು ಸತತ 4 ಶತಕ ಸೇರಿದಂತೆ ಆಡಿದ ಎಲ್ಲ ಪಂದ್ಯಗಳಲ್ಲೂ 50+ ರನ್ ರನ್ಗಳಿಸಿದ್ದರು. ಆರ್ಸಿಬಿ ಕೂಡ ಯುವ ಆಟಗಾರನಿಂದ ಅದೇ ಪ್ರದರ್ಶನವನ್ನು ನೋಡಲು ಎದುರು ನೋಡುತ್ತಿದೆ.
ಇದನ್ನು ಓದಿ:ನಾವು ಐಪಿಎಲ್ನಲ್ಲೇ ವಿನಾಶಕಾರಿ ಬ್ಯಾಟಿಂಗ್ ಬಳಗ ಹೊಂದಿದ್ದೇವೆ: ಕೆಕೆಆರ್ ನಾಯಕ ಮಾರ್ಗನ್