ಮುಂಬೈ: ಮುಂಬೈ ವಿರುದ್ಧ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 218 ರನ್ಗಳಿಗೆ ಆಲೌಟ್ ಆಗುವ ಮೂಲಕ 24 ರನ್ಗಳ ಅಲ್ಪ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಮುಂಬೈ ತಂಡವನ್ನು 194 ರನ್ಗಳಿಗೆ ಆಲೌಟ್ ಮಾಡಿ ಮೊದಲ ದಿನ 79ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡ ಶನಿವಾರ ಆಟ ಮುಂದುವರಿಸಿ 218 ರನ್ಗೆ ಆಲೌಟ್ ಆಗುವ ಮೂಲಕ 23 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಮೊದಲ ದಿನ 40 ರನ್ಗಳಿಸಿ ಔಟಾಗದೆ ಉಳಿದಿದ್ದ ಆರಂಭಿಕ ಬ್ಯಾಟ್ಸ್ಮನ್ ಆರ್ ಸಮರ್ಥ್ ಎರಡನೇ ದಿನ 86 ರನ್ಗಳಿಸಿದರು. ಖಾತೆ ತೆರೆಯದೆ ಉಳಿದಿದ್ದ ನಾಯಕ ಕರುಣ್ ನಾಯರ್ ಎರಡನೇ ದಿನ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ ಸಮರ್ಥ್ ಜೊತೆಗೂಡಿದ ಶ್ರೇಯಸ್ ಗೋಪಾಲ್ 78 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಆಘಾತದಿಂದ ಪಾರು ಮಾಡಿದರು.
ಗೋಪಾಲ್ 31 ರನ್ಗಳಿಸಿ ಔಟಾಗುತ್ತಿದ್ದಂತೆ 139 ಎಸೆತಗಳಲ್ಲಿ 13 ಬೌಂಡರಿ ಸಹಾಯದಿಂದ 86 ರನ್ಗಳಿಸಿದ್ದ ಸಮರ್ಥ್ ಕೂಡ ಔಟಾದರು. ಇವರ ಬೆನ್ನಲ್ಲೇ ಮಿಥುನ್(2),ರೋನಿತ್ ಮೋರೆ(4) ಬಂದಷ್ಟೆ ವೇಗವಾಗಿ ವಿಕೆಟ್ ಒಪ್ಪಿಸಿದರು.
ಆದರೆ ವಿಕೆಟ್ ಕೀಪರ್ ಬಿ ಆರ್ ಶರತ್ ಒಂದುಕಡೆ ವಿಕೆಟ್ ಬೀಳುತ್ತಿದ್ದರೂ ಸ್ಫೋಟಕ ಬ್ಯಾಟಿಂಗ್ ನಡೆಸಿ ಬಾಲಂಗೋಚಿಗಳ ನೆರವಿನಿಂದ ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು. ಶರತ್ 54 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 46 ರನ್ಗಳಿಸಿ ಔಟಾದರು. ಬೌಲರ್ ಕೌಶಿಕ್ 4 ವಿಕೆಟ್ನೊಂದಿಗೆ ಕರ್ನಾಟಕ ತಂಡ 68,5 ಓವರ್ಗಳಲ್ಲಿ 218 ರನ್ಗಳಿಗೆ ಆಲೌಟ್ ಆಯಿತು. ಆದರೆ 23 ರನ್ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.
ಮುಂಬೈಗೆ ಆಘಾತ ನೀಡಿದ ಮಿಥುನ್
23 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈಗೆ ವೇಗಿ ಅಭಿಮನ್ಯು ಮಿಥುನ್ ಅವರು, ರಹಾನೆ(1), ಸಿದ್ದಾರ್ಥ್ಲಾಡ್(4), ಸೂರ್ಯಕುಮಾರ್ ಯಾದವ್(10) ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರು. ಜೊತೆಗೆ ಮತ್ತೊಬ್ಬ ವೇಗಿ ವಿ ಕೌಶಿಕ್ ಅವರು, ಆದಿತ್ಯ ತಾರೆ(6), ಮುಲಾನಿ(31) ವಿಕೆಟ್ ಪಡೆದು ಮತ್ತಷ್ಟು ಶಾಕ್ ನೀಡಿದ್ದಾರೆ.
ಎರಡನೇ ದಿನದಾಟದಂತ್ಯಕ್ಕೆ ಮುಂಬೈ ತಂಡ 5 ವಿಕೆಟ್ ನಷ್ಟಕ್ಕೆ 109 ರನ್ಗಳಿಸಿ 85 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ಸರ್ಫರಾಜ್ ಖಾನ್ 53 ರನ್ಗಳಿಸಿ ಔಟಾಗದೆ ಉಳಿದುಕೊಂಡಿದ್ದಾರೆ.