ಜಮ್ಮು: ಕುತೂಹಲ ಕೆರಳಿಸಿದ್ದ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ಕೊನೆಗೂ ಕರ್ನಾಟಕದ ಹಿಡಿತಕ್ಕೆ ಸಿಕ್ಕಿದ್ದು ಕರುಣ್ ನಾಯರ್ ಪಡೆ 259 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಅಲ್ಲದೆ ಸೆಮಿಫೈನಲ್ ಹಾದಿ ಸುಗಮಗೊಳಿಸಿದೆ.
ಎರಡು ದಿನ ಮಳೆಗೆ ಆಹುತಿಯಾದರೂ ಮೂರು ಹಾಗೂ 4ನೇ ದಿನ ಎರಡು ತಂಡದ ಬೌಲರ್ಗಳು ಮೇಲುಗೈ ಸಾಧಿಸಿದರು. 3ನೇ ದಿನ ಜಮ್ಮು-ಕಾಶ್ಮೀರ ಬೌಲರ್ಗಳು ಕರ್ನಾಟಕ ತಂಡವನ್ನು 206 ರನ್ಗಳಿಗೆ ಕಟ್ಟಿಹಾಕಿದರೆ, 4ನೇ ದಿನ ಕರ್ನಾಟಕ ಬೌಲರ್ಗಳು ಜಮ್ಮು-ಕಾಶ್ಮೀರವನ್ನು 192 ರನ್ಗಳಿಗೆ ನಿಯಂತ್ರಿಸಿ 14 ರನ್ಗಳ ಸಾಧಾರಣ ಮುನ್ನಡೆಯೊಂದಿಗೆ ಸೆಮಿಫೈನಲ್ಗೆ ಗ್ರೀನ್ ಸಿಗ್ನಲ್ ಪಡೆದುಕೊಂಡರು.
ಕರ್ನಾಟಕ ತಂಡ 4ನೇ ದಿನದ ಮೊದಲ ಸೆಸನ್ನಲ್ಲೇ ಜಮ್ಮು-ಕಾಶ್ಮೀರವನ್ನು ಆಲೌಟ್ ಮಾಡಿದ್ದಲ್ಲದೆ, ಉಳಿದೆರಡು ಸೆಸನ್ನಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ 245 ರನ್ಗಳಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಸಮರ್ಥ್ 133 ಎಸೆತಗಳಲ್ಲಿ 7 ಬಾಂಡರಿ ಸಹಿತ 74, ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಕೇವಲ 33 ಎಸೆತಗಳಲ್ಲಿ 8 ಬೌಂಡರಿ ಸಹಿತ 34 ರನ್ ಚಚ್ಚಿದರು. ಆದರೆ, ನಾಯಕ ಕರುಣ್ ನಾಯರ್ ಕೇವಲ 15 ರನ್ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
79ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ ಕಣಕ್ಕಿಳಿದ ಮೊದಲ ಇನ್ನಿಂಗ್ಸ್ನ ಆಪತ್ಬಾಂಧವ ಸಿದ್ದಾರ್ಥ್ 3ನೇ ವಿಕೆಟ್ಗೆ ಸಮರ್ಥ್ ಜೊತೆಗೂಡಿ 92 ರನ್ಗಳ ಜೊತೆಯಾಟ ನೀಡಿದರು. ಸಮರ್ಥ್ ನಂತರ ಮನೀಷ್ ಪಾಂಡೆ ಜೊತೆಗೂಡಿ 46 ರನ್ ಸೇರಿಸಿದರು. ಹೊಡಿಬಡಿ ಆಟಕ್ಕೆ ಮುಂದಾದ ಪಾಂಡೆ ಕೇವಲ 35 ಎಸೆತಗಳಲ್ಲಿ 5 ಬೌಂಡರಿ, ಒಂದು ಸಿಕ್ಸರ್ ಸಹಿತ 35 ರನ್ ಸಿಡಿಸಿ ಔಟಾದರು.
136 ಎಸೆತಗಳನ್ನ ಎದುರಿಸಿರುವ ಸಿದ್ದಾರ್ಥ್ 6 ಬೌಂಡರಿ, 2 ಸಿಕ್ಸರ್ ಸಹಿತ 75 ರನ್ಗಳಿಸಿ ಔಟಾಗದೆ ಉಳಿದಿದ್ದಾರೆ. ಇವರ ಜೊತೆಗೆ ವಿಕೆಟ್ ಕೀಪರ್ ಶರತ್ 9 ರನ್ ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಈಗಾಗಲೇ ಇನ್ನಿಂಗ್ಸ್ ಮುನ್ನಡೆ ಸಾಧಿಸಿರುವ ಕರ್ನಾಟಕ ನಾಳೆ ಡಿಕ್ಲೇರ್ ಘೋಷಿಸದೆ ಸುಮ್ಮನೆ ಕ್ರೀಸ್ನಲ್ಲಿ ಕಾಲಹರಣ ಮಾಡಿದರೂ ಸೆಮಿಫೈನಲ್ ಪ್ರವೇಶಿಸಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ಬ್ಯಾಟ್ಸ್ಮನ್ಗಳನ್ನು ಧೂಳೀಪಟ ಮಾಡಿದ್ದ ಕಾಶ್ಮೀರದ ಬೌಲರ್ಗಳು 2ನೇ ಇನ್ನಿಂಗ್ಸ್ನಲ್ಲಿ ಕನ್ನಡಿಗ ದಾಂಡಿಗರ ಮುಂದೆ ಶರಣಾದರು. ನಾಯಕ ರಸೂಲ್ 2 ವಿಕೆಟ್, ಮುಜ್ತಾಬ್ ಯೂಸುಫ್ ಹಾಗೂ ಅಬಿದ್ ಮುಸ್ತಾಕ್ ತಲಾ ಒಂದು ವಿಕೆಟ್ ಪಡೆದು ತಕ್ಕಮಟ್ಟಿನ ಪ್ರತಿರೋಧ ಒಡ್ಡಿದರು.