ಮುಂಬೈ: ದೇಶಿಯ ಟೂರ್ನಿಗಳಲ್ಲಿ ಸಾಕಷ್ಟು ರನ್ ಗಳಿಸಿದ್ದರೂ ಅವಕಾಶ ಸಿಗದೇ ಮಾನಸಿಕವಾಗಿ ಕುಗ್ಗಿದ್ದ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಆಟಗಾರ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ನನಗೆ ಸ್ಫೂರ್ತಿ ತುಂಬಿದರು ಎಂದು ಯುವ ಆಟಗಾರ ಮಯಾಂಕ್ ಅಗರ್ವಾಲ್ ಹೇಳಿದ್ದಾರೆ.
ದೀರ್ಘ ಕಾಲ ದೇಶಿಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನದ ನಂತರ ಭಾರತ ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಸ್ಥಾನ ಪಡೆದ ಮಯಾಂಕ್ ಅಗರ್ವಾಲ್ ಅದ್ಭುತ ಪ್ರದರ್ಶನದ ಮೂಲಕ ಟೆಸ್ಟ್ ತಂಡದ ಕಾಯಂ ಆಟಗಾರರಾಗಿದ್ದಾರೆ. ಆದರೆ ಈ ಯಶಸ್ಸಿಗೆ ಕಾರಣ ರಾಹುಲ್ ದ್ರಾವಿಡ್ ಎಂದು ಅಗರ್ವಾಲ್ ಹೇಳಿದ್ದಾರೆ. ಅವಕಾಶ ಸಿಗದೇ ಮಾನಸಿಕವಾಗಿ ಕುಗ್ಗಿದ್ದ ನನಗೆ ಭರವಸೆ ತುಂಬಿದ್ದು ರಾಹುಲ್ ದ್ರಾವಿಡ್ ಎಂದಿದ್ದಾರೆ.
ಮಯಾಂಕ್ ಅಗರ್ವಾಲ್ ರಣಜಿ, ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಹಾಗೂ ಭಾರತ ಎ ತಂಡದ ಪರ ನಿರಂತರವಾಗಿ ರನ್ ಗಳಿಸಿದ್ದರು. ಪ್ರತಿ ಸರಣಿಯ ಆಯ್ಕೆಯ ಸಂದರ್ಭದಲ್ಲೂ ಅವಕಾಶ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದರೂ ಎರಡು ಮೂರು ವರ್ಷಗಳ ಕಾಲ ಅವಕಾಶ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ದಿಕ್ಕು ತೋಚದಂತಾಗಿ ಮನಸ್ಸಿನಲ್ಲಿ ಋಣಾತ್ಮಕ ಚಿಂತನೆಗಳೇ ಕಾಡುತ್ತಿದ್ದವು. ಭಾರತೀಯ ಕ್ರಿಕೆಟ್ ತಂಡಕ್ಕೆ ಯಾವತ್ತೂ ಆಯ್ಕೆಯಾಗಲಾರೆ ಎಂದೆನ್ನಿಸಿತ್ತು. ಆದರೆ ಇಂತಹ ಸಂದರ್ಭದಲ್ಲಿ ಭಾರತ ಎ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಆಡಿದ ಸ್ಫೂರ್ತಿಯ ಮಾತುಗಳು ನನಗೆ ಪ್ರೇರಣೆಯಾದವು ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಜೊತೆಗೆ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.
ನೀನು ಕಠಿಣ ಪರಿಶ್ರಮದಿಂದ ಇಲ್ಲಯರೆಗೆವರೆಗೂ ಬಂದಿದ್ದೀಯಾ. ಇದೆಲ್ಲಾ ನೀನೇ ಮಾಡಿರುವುದು, ಆಯ್ಕೆ ನಿನ್ನ ಕೈಯಲ್ಲಿಲ್ಲ. ಆದರೆ ನೀನು ಆಯ್ಕೆಗೆ ಸಾಕಷ್ಟು ಹತ್ತಿರದಲ್ಲೀದ್ದೀಯ ಎಂದು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅವರು ಆಡಿದ ಮಾತುಗಳೇ ನನಗೆ ಪ್ರೇರಣೆ ನೀಡಿದವು ಎಂದಿದ್ದಾರೆ.
2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ಮೊದಲ ಪಂದ್ಯದಲ್ಲೇ ಅರ್ಧಶತಕ(76) ಸಿಡಿಸಿ ಮಿಂಚಿದ್ದರು. ಒಟ್ಟು 17 ಇನ್ನಿಂಗ್ಸ್ ಆಡಿರುವ ಅವರು ಒಟ್ಟಾರೆ 974 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 4 ಅರ್ಧಶತಕ ಸೇರಿವೆ.