ಲಾಹೋರ್: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್, ತಂತ್ರಗಾರಿಕೆ ಮತ್ತು ಒತ್ತಡದಲ್ಲಿ ಪ್ರದರ್ಶನ ನೀಡುವುದರಲ್ಲಿ ರಾಹುಲ್ ದ್ರಾವಿಡ್ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಬಣ್ಣಿಸಿದ್ದಾರೆ.
ಬ್ಯಾಟಿಂಗ್ ತಂತ್ರಗಾರಿಕೆ ವಿಷಯದಲ್ಲಿ ಮತ್ತು ಒತ್ತಡದ ಸಂದರ್ಭದಲ್ಲಿ ಪ್ರದರ್ಶನ ನೀಡುವುದರಲ್ಲಿ ಭಾರತವನ್ನು ಪ್ರತಿನಿಧಿಸಿರುವ ಎಲ್ಲಾ ಆಟಗಾರರಿಗಿಂತ ದ್ರಾವಿಡ್ ಒಂದು ಹೆಜ್ಜೆ ಮುಂದಿದ್ದಾರೆ. ಸೆಹ್ವಾಗ್ ವಿಷಯದಲ್ಲಿ ನಾನು ಹೇಳಿದಂತೆ ದ್ರಾವಿಡ್ ಕೂಡ ಸಚಿನ್ ನೆರಳಿನಲ್ಲಿ ಆಡಿದ್ದಾರೆ ಎಂದು ಲತೀಫ್ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ತಿಳಿಸಿದ್ದಾರೆ.
ಲತೀಫ್ ಪ್ರಕಾರ, ಬೇಗನೆ ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ದ್ರಾವಿಡ್ ಭಾರತ ತಂಡದ ಪರವಾಗಿ ಏಕಾಂಗಿ ಹೋರಾಟ ನಡೆಸುತ್ತಿದ್ದರು ಎಂದಿದ್ದಾರೆ.
ಸಚಿನ್ ಅವರಿಗೆ ಅರಂಭದಿಂದಲೂ ಆಕ್ರಮಣಕಾರಿ ಆಟ ಆಡುವುದದಲ್ಲಿ ಸಾಕಷ್ಟು ವಿಶ್ವಾಸವಿತ್ತು. ಆದ್ರೆ ದ್ರಾವಿಡ್ ಅವರಿಗೆ ಅದು ಇರಲಿಲ್ಲ, ಆದರೂ ಅವರು ಭಾರತ ತಂಡದ ಪರ ವಿಭಿನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಭಾರತವು ಒಂದೆರೆಡು ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡಾಗ ಅವರೇ ಮುಖ್ಯ ಬ್ಯಾಟ್ಸ್ಮನ್ ಆಗಿರುತ್ತಿದ್ದರು. ಅದಕ್ಕಾಗಿಯೇ ಅವರನ್ನು 'ದಿ ವಾಲ್' ಎಂದು ಕರೆಯಲಾಯಿತು ಎಂದು ಲತೀಫ್ ಹೇಳಿದ್ದಾರೆ.
ನೀವು ಜೊತೆಯಾಟಗಳನ್ನು ನೋಡಿದರೆ ತೆಂಡೂಲ್ಕರ್, ಸೆಹ್ವಾಗ್ ಮತ್ತು ಗಂಗೂಲಿಯವರೊಂದಿಗೆ ದ್ರಾವಿಡ್ ಹೆಸರನ್ನು ಸಾಕಷ್ಟು ಬಾರಿ ಕಾಣಬಹುದು. ನನ್ನ ಪ್ರಕಾರ ಅವರು ರನ್ಗಳಿಸಿದ ಸ್ಥಳ ಯಾವುದಾದರೂ ಇದ್ದರೆ ತಿಳಿಸಿ. ಅವರು ಪಾಕಿಸ್ತಾನದ ವಿರುದ್ಧ ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಎಲ್ಲೆಡೆ ಉತ್ತಮ ರನ್ಗಳಿಸಿದ್ದಾರೆ ಎಂದು ಪಾಕಿಸ್ತಾನ ಪರ 37 ಟೆಸ್ಟ್, 166 ಏಕದಿನ ಪಂದ್ಯಗಳನ್ನಾಡಿರುವ ಲತೀಫ್ ಹೇಳಿದ್ದಾರೆ.
ದ್ರಾವಿಡ್ ಗಂಗೂಲಿಯವರೊಡನೆ 1999ರ ವಿಶ್ವಕಪ್ನ ಲೀಗ್ ಪಂದ್ಯದಲ್ಲಿ 318 ರನ್ಗಳ ವಿಶ್ವದಾಖಲೆಯ ಜೊತೆಯಾಟ ಆಡಿದ್ದರು. ಅದು ಏಕದಿನ ಕ್ರಿಕೆಟ್ನಲ್ಲಿ ಮೊದಲ 300 ರನ್ಗಳ ಜೊತೆಯಾಟವಾಗಿತ್ತು. ದ್ರಾವಿಡ್ 164 ಟೆಸ್ಟ್ ಮತ್ತು 344 ಏಕದಿನ ಹಾಗೂ ಒಂದು ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 13,288, ಏಕದಿನಲ್ಲಿ 10,899 ರನ್ ಗಳಿಸಿದ್ದಾರೆ.