ನವದೆಹಲಿ : ಆಸ್ಟ್ರೇಲಿಯಾ ಪ್ರವಾಸದಲ್ಲಿ ನೆಟ್ಸ್‌ನಲ್ಲಿ ಜಾಸ್ತಿ ಬ್ಯಾಟಿಂಗ್ ಮಾಡದಂತೆ ಹಾಗೂ ನಾಯಕತ್ವದ ಕಡೆ ಹೆಚ್ಚು ಗಮನ ಹರಿಸುವಂತೆ ಮಾಜಿ ಕ್ರಿಕೆಟಿಗ, ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದರು ಎಂದು ಅಜಿಂಕ್ಯ ರಹಾನೆ ನೆನಪಿಸಿಕೊಂಡಿದ್ದಾರೆ.
ಹರ್ಷ ಭೋಗ್ಲೆ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ರಹಾನೆ ಈ ವಿಷಯ ಬಹಿರಂಗಪಡಿಸಿದ್ದಾರೆ. ಅಡಿಲೇಡ್ ಟೆಸ್ಟ್‌ನಲ್ಲಿ ಸೋಲುಂಡ ಬಳಿಕ ಟೀಂ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇಲೆ ತವರಿಗೆ ಮರಳಿದ್ದರು.
ಆ ಬಳಿಕ ಮೆಲ್ಬೋರ್ನ್‌ನಲ್ಲಿ ನಡೆಯಲಿದ್ದ ಇನ್ನುಳಿದ ಮೂರು ಪಂದ್ಯದ ನಾಯಕತ್ವ ಜವಾಬ್ದಾರಿಯನ್ನು ಅಜಿಂಕ್ಯ ರಹಾನೆ ವಹಿಸಿಕೊಂಡರು. ಅದರಂತೆ ಭಾರತ ತಂಡ ಮೆಲ್ಬೋರ್ನ್‌ನಲ್ಲಿ 8 ವಿಕೆಟ್‌ಗಳ ಜಯ, ಸಿಡ್ನಿಯಲ್ಲಿ ಡ್ರಾ ಹಾಗೂ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಮೂರು ವಿಕೆಟ್ ಜಯ ಸಾಧಿಸಿತ್ತು.
"ದುಬೈನಿಂದ ಆಸ್ಟ್ರೇಲಿಯಾಗೆ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ರಾಹುಲ್ ಭಾಯ್ ನನಗೆ ಕರೆ ಮಾಡಿದ್ದರು. ಮೊದಲ ಪಂದ್ಯದ ಬಳಿಕ ನೀವೇ ತಂಡವನ್ನು ಮುನ್ನಡೆಸುವುದೆಂದು ನನಗೆ ತಿಳಿದಿದೆ. ಒತ್ತಡಕ್ಕೆ ಒಳಗಾಗಬೇಡಿ. ಮಾನಸಿಕವಾಗಿ ಬಲಿಷ್ಠವಾಗಿರಿ. ನೆಟ್ಸ್‌ನಲ್ಲಿ ತುಂಬಾ ಸಮಯ ಬ್ಯಾಟಿಂಗ್ ಮಾಡಬೇಡಿ" ಎಂದು ಹೇಳಿದ್ದರು ಎಂದರು.
"ರಾಹುಲ್ ಭಾಯ್ ನನ್ನ ಬ್ಯಾಟಿಂಗ್‌ನ ತುಂಬಾ ಇಷ್ಟಪಡುತ್ತಾರೆ. 'ನೆಟ್ಸ್‌ನಲ್ಲಿ ಜಾಸ್ತಿ ಬ್ಯಾಟಿಂಗ್ ಮಾಡಬೇಡಿ, ನಿಮ್ಮ ತಯಾರಿ ತುಂಬಾ ಚೆನ್ನಾಗಿದೆ, ನಿಮ್ಮ ಬ್ಯಾಟಿಂಗ್ ಕೂಡ ಚೆನ್ನಾಗಿಯೇ ಇದೆ. ಹಾಗಾಗಿ, ಯಾವುದೇ ಒತ್ತಡಕ್ಕೆ ಒಳಗಾಗಬೇಡಿ.
ತಂಡವನ್ನು ಹೇಗೆ ಮುನ್ನಡೆಸಬೇಕೆಂಬ ಬಗ್ಗೆ ಯೋಚಿಸಿ, ಆಟಗಾರರಿಗೆ ವಿಶ್ವಾಸ ತುಂಬಿಸಿ, ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ' ಎಂದು ದ್ರಾವಿಡ್ ಹೇಳಿದ್ದ ಮಾತು ನಿಜಕ್ಕೂ ಸಹಕಾರಿಯಾಯಿತು" ಎಂದು ರಹಾನೆ ಮನದುಂಬಿ ರಾಹುಲ್ ದ್ರಾವಿಡ್ ಅವರನ್ನ ಸ್ಮರಿಸಿಕೊಂಡಿದ್ದಾರೆ.