ನವೆದೆಹಲಿ: 2ನೇ ಟೆಸ್ಟ್ನಲ್ಲಿ 5 ಬೌಲರ್ಗಳ ತಂತ್ರಗಾರಿಗೆ ಅಜಿಂಕ್ಯಾ ರಹಾನೆ ನಾಯಕತ್ವ ಭಾರತ ತಂಡಕ್ಕೆ ಅತ್ಯುತ್ತಮ ಫಲಿತಾಂಶ ತಂದುಕೊಟ್ಟಿದೆ. ಇದೀಗ ಅನುಭವಿ ರೋಹಿತ್ ಶರ್ಮಾ 3ನೇ ಟೆಸ್ಟ್ಗೆ ತಂಡ ಸೇರಿಕೊಳ್ಳುವುದರಿಂದ ಬ್ಯಾಟಿಂಗ್ ವಿಭಾಗದಲ್ಲಿ, ಅದರಲ್ಲೂ ಟಾಪ್ ಆರ್ಡರ್ನಲ್ಲಿ ಅನಿವಾರ್ಯವಾಗಿ ಬದಲಾವಣೆ ಮಾಡಲೇಬೇಕಿದೆ.
ಮಧ್ಯಮ ಕ್ರಮಾಂಕದಿಂದ ಆರಂಭಿಕರಾಗಿ ಬದಲಾಗಿದ್ದ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಯಶಸ್ವು ಕಂಡಿದ್ದರು. ಆದರೆ, ಸಾಕಷ್ಟು ಅಭ್ಯಾಸದ ಕೊರತೆ ಇರುವುದರಿಂದ ರೋಹಿತ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ.
"ರೋಹಿತ್ ತಂಡ ಸೇರಿಕೊಂಡ ಬಳಿಕ ಅವರ ಜೊತೆ ನಾವು ಮಾತನಾಡುತ್ತೇವೆ. ಅವರ ದೇಹ ಸ್ಥಿತಿ ಹೇಗಿದೆ ಎನ್ನುವುದನ್ನ ತಿಳಿದುಕೊಳ್ಳಬೇಕಿದೆ. ಏಕೆಂದರೆ ಅವರೂ 2 ವಾರಗಳ ಕ್ವಾರಂಟೈನ್ ಮುಗಿಸಿ ಬಂದಿದ್ದಾರೆ. ಅವರ ಮೂರನೇ ಪಂದ್ಯಕ್ಕೆ ಅವರನ್ನು ಸೇರಿಸಿಕೊಳ್ಳುವ ಮುನ್ನ ಅವರ ಭಾವನೆಯನ್ನು ತಿಳಿದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.
ಇನ್ನು ಎರಡನೇ ಟೆಸ್ಟ್ನಲ್ಲಿ ಶುಬ್ಮನ್ ಗಿಲ್ ಆತ್ಮ ವಿಶ್ವಾಸದಿಂದ ಬ್ಯಾಟಿಂಗ್ ಮಾಡಿದ್ದಾರೆ. ಅವರು ಡೆಬ್ಯೂಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ 45 ಮತ್ತು 35ರನ್ಗಳಿಸಿದ್ದಾರೆ. ಹಾಗಾಗಿ ರೋಹಿತ್ ಫಿಟ್ ಎಂದಾದರೆ ಮಯಾಂಕ್ ಅಥವಾ ಹನುಮ ವಿಹಾರಿಯನ್ನು ತಂಡದಿಂದ ಕೈಬಿಡಬೇಕಾಗುತ್ತದೆ.
ಇದನ್ನು ಓದಿ: ಆಸೀಸ್ ಲೆಜೆಂಡ್ಗಳು ರಹಾನೆ ನಾಯಕತ್ವ ಹೊಗಳುತ್ತಿರುವುದು ಹೃದಯಸ್ಪರ್ಶಿಯಾಗಿತ್ತು: ಗವಾಸ್ಕರ್
ರೋಹಿತ್ ಆರಂಭಿಕನಾಗಿ ತವರಿನಲ್ಲಿ ಮಾತ್ರ ಯಶಸ್ವಿಯಾಗಿದ್ದರು. ಅವರನ್ನು ನ್ಯೂಜಿಲ್ಯಾಂಡ್ ಸರಣಿಗೆ ಆಯ್ಕೆ ಮಾಡಿತ್ತಾದರೂ ಗಾಯಗೊಂಡು ಟೂರ್ನಿಯ ಅರ್ಧದಲ್ಲೇ ತಂಡದಿಂದ ಹೊರಬಿದ್ದಿದ್ದರು. ಇದೀಗ ಐಪಿಎಲ್ ಮುಗಿದ ನಂತರ ಮತ್ತೊಂದು ಗಾಯದಿಂದ ಚೇತರಿಸಿಕೊಂಡು ಹೊರ ಬಂದಿರುವ ರೋಹಿತ್ರನ್ನು ಮಧ್ಯಮ ಕ್ರಮಾಂಕ ಅಥವಾ ಆರಂಭಿಕ ಸ್ಥಾನದಲ್ಲಿ ಆಡಿಸಬೇಕೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಪ್ರಕಾರ ಮಯಾಂಕ್ ಅವರನ್ನು ತಂಡದಿಂದ ಕೈಬಿಡುವುದು ಕಠಿಣ ನಿರ್ಧಾರ. ಏಕೆಂದರೆ ಮಯಾಂಕ್ ಕಳೆದ 18 ತಿಂಗಳಲ್ಲಿ ಶತಕ ಹಾಗೂ ದ್ವಿಶತಕಗಳನ್ನು ಸಿಡಿಸಿದ್ದಾರೆ. ಇನ್ನು ರೋಹಿತ್ ನಿರ್ಧಾರ ಕೂಡ ಇಲ್ಲಿ ಮುಖ್ಯವಾಗುತ್ತದೆ. ಅವರು ದೀರ್ಘ ಸಮಯದ ನಂತರ ಬ್ಯಾಟಿಂಗ್ ಮಾಡುವುದರಿಂದ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರಾ ಅಥವಾ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆಯೇ ಎಂಬುದರ ಮೇಲೆ ಯಾರನ್ನು ಕೈಬಿಡಬೇಕೆಂಬುದು ನಿರ್ಧಾರವಾಗಲಿದೆ ಎಂದಿದ್ದಾರೆ.
ಅಲ್ಲದೇ ರೋಹಿತ್ರಿಂದ ಟೀಮ್ ಮ್ಯಾನೇಜ್ಮೆಂಟ್ ಕೂಡ ಏನನ್ನು ನಿರೀಕ್ಷೆ ಮಾಡುತ್ತಿದೆ ಎನ್ನುವುದು ಕೂಡ ಮುಖ್ಯ ಎಂದು ಹೇಳಿದ್ದಾರೆ.