ಮೊಹಾಲಿ: ಪ್ರತಿದಿನ 9000 ಪ್ರಕರಣ ಕಂಡುಬರುವ ಮುಂಬೈನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಮೊಹಾಲಿಯನ್ನು ತಿರಸ್ಕರಿಸಿರುವುದು ಆಶ್ಚರ್ಯ ತಂದಿದೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಬಿಸಿಸಿಐ ಭಾನುವಾರ ಐಪಿಎಲ್ ವೇಳಾಪಟ್ಟಿ ಪ್ರಕಟಿಸಿದೆ. ಮಿಲಿಯನ್ ಡಾಲರ್ ಟೂರ್ನಿ ಆಯೋಜಿಸಲು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹ್ಮದಾಬಾದ್, ದೆಹಲಿಗಳನ್ನು ಆಯ್ಕೆ ಮಾಡಿಕೊಂಡಿದೆ. ಏಪ್ರಿಲ್ 9 ರಿಂದ ಟೂರ್ನಿ ಮುಚ್ಚಿದ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೇ 30 ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಬಿಸಿಸಿಐ 14ನೇ ಆವೃತ್ತಿಗಾಗಿ ಬಿಸಿಸಿಐ ಆಯ್ಕೆ ಮಾಡಿಕೊಂಡಿರುವ ಸ್ಥಳಗಳು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ದೇಶದ ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಮುಂಬೈ ಅನ್ನು ಐಪಿಎಲ್ಗಾಗಿ ಆಯ್ಕೆ ಮಾಡಿಕೊಂಡಿದ್ದು, ಹೈದರಾಬಾದ್, ಮೊಹಾಲಿಯನ್ನು ಕೈಬಿಟ್ಟಿರುವುದರಿಂದ ವಿವಾದ ಹುಟ್ಟಿಕೊಳ್ಳಲು ಕಾರಣವಾಗಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪ್ರತಿದಿನ 9000 ಕೊರೊನಾ ಪ್ರಕರಣಗಳು ದಾಖಲಾಗುವ ಮುಂಬೈನಲ್ಲಿ ಐಪಿಎಲ್ ಆಯೋಜಿಸಬಹುದೇ ಎಂದು ಬಿಸಿಸಿಐಗೆ ಪತ್ರ ಬರೆದಿದ್ದೇನೆ. ಅಲ್ಲದೆ ಮೊಹಾಲಿಯನ್ನು ಆಯ್ಕೆ ಮಾಡದಿರುವುದಕ್ಕೆ ಕಾರಣವೇನು. ನಾವು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದರೂ ಮೊಹಾಲಿ ಕೈಬಿಟ್ಟಿರುವುದಕ್ಕೆ ಆಶ್ಚರ್ಯವಾಗಿದೆ ಎಂದಿದ್ದಾರೆ.
ಆದರೆ ಐಪಿಎಲ್ ಮಂಡಳಿ, ಪಂಜಾಬ್ನಲ್ಲಿ ರೈತರು ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಮೊಹಾಲಿಯನ್ನು ಐಪಿಎಲ್ ಸ್ಥಳವಾಗಿ ಆಯ್ಕೆ ಮಾಡಿಲ್ಲ ಎಂದು ತಿಳಿಸಿದೆ.
ಇದನ್ನು ಓದಿ:ಸಮರ್ಥ್-ಪಡಿಕ್ಕಲ್ ಆರ್ಭಟ: ಕೇರಳ ಬಗ್ಗುಬಡಿದು ಸೆಮಿಫೈನಲ್ಗೆ ಎಂಟ್ರಿಕೊಟ್ಟ ಕರ್ನಾಟಕ