ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಮುಖ್ಯಸ್ಥ ಹುದ್ದೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣಾ ಪ್ರಕ್ರಿಯೆ ಶುರುವಾಗಿದ್ದು, ಡಿಸೆಂಬರ್ ಆರಂಭದ ವೇಳೆಗೆ ಹೊಸ ಅಧ್ಯಕ್ಷ ಐಸಿಸಿ ಗದ್ದುಗೆ ಏರಬಹುದು ಎನ್ನಲಾಗಿದೆ.
ಐಸಿಸಿ ಲೆಕ್ಕಪರಿಶೋಧನಾ ಸಮಿತಿಯ ಸ್ವತಂತ್ರ ಅಧ್ಯಕ್ಷರ ಮೇಲ್ವೀಚಾರಣೆಯಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಲು ನಿರ್ದೇಶಕರ ಮಂಡಳಿಗೆ (ಬೋರ್ಡ್ ಆಫ್ ಡೈರೆಕ್ಟರ್ಸ್) 2020ರ ಅಕ್ಟೋಬರ್ 18ರವರೆಗ ಗಡುವು ನೀಡಲಾಗಿದೆ.
" ಐಸಿಸಿ ಸಂವಿಧಾನದಲ್ಲಿ ವಿವರಿಸಿರುವಂತೆ, ಅಧ್ಯಕ್ಷ ಹುದ್ದೆಗೆ ಅರ್ಹತೆ ಪಡೆಯಲು, ಸಂಭಾವ್ಯ ಅಭ್ಯರ್ಥಿಗಳು ಪ್ರಸ್ತುತ ಅಥವಾ ಮಾಜಿ ಐಸಿಸಿ ನಿರ್ದೇಶಕರಾಗಿರಬೇಕು" ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಒಂದು ವೇಳೆ, ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ಮತದಾನ ನಡೆಸಬೇಕೆ ಎಂಬುದನ್ನು ಐಸಿಸಿ ಇನ್ನೂ ನಿರ್ಧರಿಸಿಲ್ಲ. ನೂತನ ಮುಖ್ಯಸ್ಥರು ಈ ವರ್ಷದ ಡಿಸೆಂಬರ್‌ನಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಐಸಿಸಿ ಈಗಾಗಲೇ ತಿಳಿಸಿದೆ. ನಿರ್ದೇಶಕರ ಮಂಡಳಿಯು ಸೂಚಿಸುವ ಅಭ್ಯರ್ಥಿಗಳು ಐಸಿಸಿ ಮುಖ್ಯಸ್ಥ ಹುದ್ದೆಗೆ ಸ್ಪರ್ಧಿಸಲಿದ್ದಾರೆ.
ಎರಡು ವರ್ಷಗಳ ಅವಧಿಯ ನಂತರ ಶಶಾಂಕ್ ಮನೋಹರ್ ಈ ವರ್ಷದ ಜುಲೈನಲ್ಲಿ ಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಅಂದಿನಿಂದಲೂ ಈ ಹುದ್ದೆ ಖಾಲಿ ಇದೆ. ಸಿಂಗಾಪುರದ ಇಮ್ರಾನ್ ಖ್ವಾಜಾ ಹಂಗಾಮಿ ಐಸಿಸಿ ಅಧ್ಯಕ್ಷರಾಗಿದ್ದಾರೆ.