ಡರ್ಬನ್: ನಾಯಕ ಪ್ರಿಯಂ ಗರ್ಗ್ ಅವರ ಆಕರ್ಷಕ ಶತಕದ ನೆರವಿನಿಂದ ಅಂಡರ್ 19 ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 66 ರನ್ಗಳ ಜಯ ಸಾಧಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಭಾರತ, ಜಿಂಬಾಬ್ವೆ, ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಚತುಷ್ಕೋನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕಿರಿಯರ ತಂಡ ಗೆಲುವಿನೊಂದಿಗೆ ಖಾತೆ ತೆರೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ ತಂಡ ಸ್ಫೋಟಕ ಬ್ಯಾಟ್ಸಮನ್ ಯಶಸ್ವಿ ಜೈಸ್ವಾಲ್(13) ಹಾಗೂ ದಿವ್ಯಾನ್ಶ್ ಸಕ್ಸೇನಾ (7) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು.
ಆದರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ತಿಲಕ್ ವರ್ಮಾ(42) ಹಾಗೂ ಪ್ರಿಯಂ ಗರ್ಗ್(110) 3ನೇ ವಿಕೆಟ್ ಜೊತೆಯಾಟಕ್ಕೆ 91 ರನ್ ಸೇರಿಸಿದರು. 69 ಎಸೆತಗಳನ್ನೆದುರಿಸಿದ ತಿಲಕ್ 4 ಬೌಂಡರಿ ಸಹಿತ 42 ರನ್ ಗಳಿಸಿ ಔಟಾದರು.
ನಂತರ ಬಂದ ವಿಕೆಟ್ ಕೀಪರ್ ದೃವ್ ಜುರೆಲ್ ನಾಯಕ ಗರ್ಗ್ ಜೊತೆ ಸೇರಿ 5ನೇ ವಿಕೆಟ್ಗೆ 104 ರನ್ ಸೇರಿಸಿದರು. 74 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ 65 ರನ್ ಗಳಿಸಿ ಔಟಾದರು. ನಾಯಕ ಪ್ರಿಯಂ ಗರ್ಗ್ 103 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 110 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಮಂಡಿ ಖುಮಾಲೊ 4 ವಿಕೆಟ್ ಹಾಗೂ ಅಚಿಲ್ ಕ್ಲೋಯೆಟ್ ಒಂದು ವಿಕೆಟ್ ಪಡೆದರು.
265 ರನ್ಗಳ ಟಾರ್ಗೆಟ್ ಪಡೆದ ದಕ್ಷಿಣ ಆಫ್ರಿಕಾ ತಂಡ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು198 ರನ್ಗಳಿಸಲಷ್ಟೇ ಶಕ್ತವಾಯಿತು.
ದಕ್ಷಿಣ ಆಫ್ರಿಕಾ ಪರ ಆರಂಭಿಕರಾದ ಆ್ಯಂಡ್ರಿವ್ ಲೋವ್ 45, ನಾಯಕ ಬ್ರೈಸ್ ಪರ್ಸನ್ಸ್ 57 ರನ್ ಗಳಿಸಿ ಗೆಲುವಿಗಾಗಿ ಪ್ರತಿರೋಧ ತೋರಿದರಾದರು ಉಳಿದ ಬ್ಯಾಟ್ಸ್ಮನ್ಗಳು ವಿಫಲವಾಗಿದ್ದರಿಂದ ಸೋಲನಭವಿಸಬೇಕಾಯಿತು.
ಭಾರತದ ಪರ ಸುಶಾಂತ್ ಮಿಶ್ರಾ 4 ವಿಕೆಟ್, ರವಿ ಬಿಶೋನಿ 2 ವಿಕೆಟ್, ಅಥರ್ವ ಅಂಕೋಲೆಕರ್, ಕಾರ್ತಿಕ್ ತ್ಯಾಗಿ ಹಾಗೂ ತಿಲಕ್ ವರ್ಮಾ ತಲಾ ಒಂದು ವಿಕೆಟ್ ಪಡೆದು ಗೆಲವಿನ ರೂವಾರಿಯಾದರು. ಶತಕ ಸಿಡಿಸಿದ ಪ್ರಿಯಂ ಗರ್ಗ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮತ್ತೊಂದು ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಜಿಂಬಾಬ್ವೆ ವಿರುದ್ಧ 2 ರನ್ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ್ದ ಕಿವೀಸ್ 204 ರನ್ ಗಳಿಸಿದರೆ, ಜಿಂಬಾಬ್ವೆ 41 ಓವರ್ಗಳಲ್ಲಿ 202 ರನ್ಗಳಿಗೆ ಆಲೌಟಾಗಿ ನಿರಾಶೆ ಅನುಭವಿಸಿತು.