ಟ್ರಿನಿಡಾಡ್: ನಾಯಕ ಪೊಲಾರ್ಡ್ ಆಲ್ರೌಂಡರ್ ಆಟ ಹಾಗೂ ಡರೆನ್ ಬ್ರಾವೋ(50) ಅವರ ಉಪಯುಕ್ತ ಬ್ಯಾಟಿಂಗ್ ಕೊಡುಗೆ ನೆರವಿನಿಂದ ಟ್ರಿಂಬಾಗೋ ನೈಟ್ರೈಡರ್ಸ್ ತಂಡ ಸಿಪಿಎಲ್ನಲ್ಲಿ ಸತತ 9ನೇ ಗೆಲುವು ದಾಖಲಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೈಟ್ ರೈಡರ್ಸ್ ತಂಡ 175 ರನ್ಗಳಿಸಿತ್ತು. ನಾಯಕ ಕೀರನ್ ಪೊಲಾರ್ಡ್ 21 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 42, ಹಾಗೂ ಡರೇನ್ ಬ್ರಾವೋ 42 ಎಸೆತಗಳಲ್ಲಿ 50 ರನ್ಗಳಿಸಿ ಉತ್ತಮ ಮೊತ್ತ ದಾಖಲಿಸಲು ನೆರವಾದರು.
176 ರನ್ಗಳನ್ನು ಬೆನ್ನತ್ತಿದ ಲೂಸಿಯಾ ಜೌಕ್ಸ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 152 ರನ್ಗಳಿಸಲಷ್ಟೇ ಶಕ್ತವಾಗಿ 23 ರನ್ಗಳ ಸೋಲನುಭವಿಸಿತು.
ಆರಂಭಿಕನಾಗಿ ಕಣಕ್ಕಿಳಿದಿದ್ದ ಮಾರ್ಕ್ ಡೇಯಲ್ 40, ಆ್ಯಂಡ್ರೆ ಫ್ಲೆಚರ್ 42 ರನ್ಗಳಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.
ಟಿಕೆಆರ್ ಪರ ಡ್ವೇನ್ ಬ್ರಾವೋ 2 ವಿಕೆಟ್, ಜೇಡನ್ ಸೀಲ್ಸ್ 2 ವಿಕೆಟ್ ಹಾಗೂ ಪೊಲಾರ್ಡ್ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮತ್ತೊಂದು ಪಂದ್ಯದಲ್ಲಿ ಬಾರ್ಬಡೋಸ್ ತನ್ನ ಕೊನೆಯ ಪಂದ್ಯ ಗೆದ್ದು ಲೀಗ್ನಿಂದ ಹೊರಬಿದ್ದಿತು. ಟೂರ್ನಿಯುದ್ದಕ್ಕೂ ಹೀನಾಯ ಪ್ರದರ್ಶನ ತೋರಿರುವ ಬಾರ್ಬಡೋಸ್ ಜಮೈಕ ತಲವಾಸ್ ನೀಡಿದ 162 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ 7 ವಿಕೆಟ್ಗಳ ಜಯ ಸಾಧಿಸಿತು. ನಾಯಕ ಜೇಸನ್ ಹೋಲ್ಡರ್ ಬೌಲಿಂಗ್ನಲ್ಲಿ ಒಂದು ವಿಕೆಟ್ ಪಡೆದಿದ್ದಲ್ಲದೆ, ಬ್ಯಾಟಿಂಗ್ನಲ್ಲೂ 42 ಎಸೆತಗಳಲ್ಲಿ 69 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.