ಸಿಂಗಾಪುರ್: ಭಾರತ ತಂಡದ ಆಟಗಾರನಾಗಿ, ನಾಯಕನಾಗಿ ಕೋಚ್ ಆಗಿ ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗ ರಾಹುಲ್ ದ್ರಾವಿಡ್, ಅಹರ್ನಿಶಿ ಟೆಸ್ಟ್ ಪಂದ್ಯ ಖಂಡಿತಾ ಇಷ್ಟು ದಿನ ಕಳೆದುಕೊಂಡಿದ್ದ ಅಭಿಮಾನಿಗಳನ್ನು ಮತ್ತೆ ಮೈದಾನಕ್ಕೆ ಕರೆತರಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಂಗಾಪುರ್ ರಾಷ್ಟ್ರೀಯ ವಿಶ್ವವಿದ್ಯಾನಿಯಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ದ್ರಾವಿಡ್, ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ನಡೆಯುವ ಹಗಲು ರಾತ್ರಿ ಟೆಸ್ಟ್ ಪಂದ್ಯ ಖಂಡಿತಾ ಸಾವಿರಾರು ಕ್ರಿಕೆಟ್ ಅಭಿಮಾನಿಗಳನ್ನು ಮರಳಿ ಕ್ರೀಡಾಂಗಣಕ್ಕೆ ಕರೆತರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2001ರಲ್ಲಿ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಒಂದು ಲಕ್ಷಜನ ಸೇರುತ್ತಿದ್ದರು. ಅಂದು ಎಲ್ಲರ ಮನೆಯಲ್ಲಿ ಹೆಚ್ಡಿ ಟಿವಿಗಳಿರಲಿಲ್ಲ, ಮೊಬೈಲ್ನಲ್ಲೇ ಕ್ರಿಕೆಟ್ ನೋಡುವ ಸೌಲಭ್ಯವಿರಲಿಲ್ಲ, ಏನೇ ನೋಡಬೇಕೆಂದರೂ ಮೈದಾನಕ್ಕೆ ಬರಲೇಬೇಕಿತ್ತು. ಆದರೆ, ಇಂದು ಕಾಲ ಬದಲಾಗಿ ಟೆಕ್ನಾಲಜಿಗಳಿಂದ ಜನರು ಮನೆಯಲ್ಲೇ ಕುಳಿತು ಕ್ರಿಕೆಟ್ ವೀಕ್ಷಿಸಲು ಬಯಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ಗೂ ಜನರು ಕರೆತರುವ ಹಾಗೆ ಮಾಡಲು ಈ ಅಹರ್ನಿಶಿ ಟೆಸ್ಟ್ ಪಂದ್ಯದಿಂದ ಸಾಧ್ಯವಿದೆ ಎಂದಿದ್ದಾರೆ.
ಆದರೆ, ಇದಕ್ಕೂ ಮುನ್ನ ಕೆಲವು ಬದಲಾವಣೆಗಳು ಅಗತ್ಯವಾಗಿದೆ. ಆ್ಯಶಸ್ ಟೆಸ್ಟ್ ಪಂದ್ಯದ ವೇಳೆ ಮೈದಾನ ತುಂಬಿರುತ್ತದೆ. ಏಕೆಂದರೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ನಲ್ಲಿ ಉತ್ತಮ ಆರೋಗ್ಯಕರ ಕ್ರೀಡಾಂಗಣದ ವ್ಯವಸ್ಥೆಯಿದೆ. ಅಂತಹ ಜನಸಂದಣಿಯನ್ನು ನಾವು ನಮ್ಮ ದೇಶದಲ್ಲಿ ಕಾಣಬೇಕಾದರೆ ಉತ್ತಮ ಸ್ಟೇಡಿಯಂ ವ್ಯವಸ್ಥೆಯನ್ನು ಮಾಡಿಕೊಡಬೇಕಿದೆ. ಮೊದಲಾಗಿ ಶೌಚಾಲಯ, ಸೀಟ್ ವ್ಯವಸ್ಥೆ ಹಾಗೂ ಕಾರ್ ಪಾರ್ಕಿಂಗ್ ನಿರ್ಮಾಣ ಮಾಡುವುದರ ಕಡೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಮಾತನಾಡಿದ ದ್ರಾವಿಡ್," ಪಿಂಕ್ ಬಾಲ್ ಉತ್ತಮವಾಗಿದೆ. ಈಗಾಗಲೇ ಪೂಜಾರ ಹಾಗೂ ರಹಾನೆ ಎನ್ಸಿಎನಲ್ಲಿ ಅಭ್ಯಾಸ ಮಾಡಿದ್ದಾರೆ. 7:30ರ ನಂತರ ಹಿಮ ಬೀಳುವುದರಿಂದ ಡೇ ಅಂಡ್ ನೈಟ್ ಟೆಸ್ಟ್ಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಪಂದ್ಯಕ್ಕೆ ಜನರನ್ನು ಸೇರಿಸುವುದರ ಕಡೆಗೆ ಹೆಚ್ಚು ಗಮನ ನೀಡಬೇಕಿದೆ" ಎಂದಿದ್ದಾರೆ.