ಮೆಲ್ಬರ್ನ್, ಆಸ್ಟ್ರೇಲಿಯಾ: 2019ರ ಆ್ಯಶಸ್ ಸರಣಿಯಲ್ಲಿ ಹೆಬ್ಬೆರಳು ತೀವ್ರವಾಗಿ ಗಾಯಗೊಂಡಿದ್ದರೂ ಆಟದಲ್ಲಿ ಪಾಲ್ಗೊಂಡಿದ್ದೆ ಎಂದು ಆಸ್ಟ್ರೇಲಿಯನ್ ಬೌಲರ್ ಪೀಟರ್ ಸಿಡೆಲ್ ವಿಷಯ ಬಹಿರಂಗಪಡಿಸಿದ್ದಾರೆ. ''ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಎಡಗೈನ ಹೆಬ್ಬೆರಳಿಗೆ ಗಾಯಗೊಂಡಿದ್ದೆ, ಆದರೂ ಕೂಡಾ ಆಟದಲ್ಲಿ ಮುಂದುವರೆದಿದ್ದೆ. ಇದೆಲ್ಲಾ ಕ್ರೀಡೆಯ ಒಂದು ಭಾಗವಷ್ಟೇ. ಆಟದುದ್ದಕ್ಕೂ ಗಾಯಗಳಾಗುವುದು ಸಾಮಾನ್ಯ'' ಎಂದಿದ್ದಾರೆ.
ಪೀಟರ್ ಸಿಡೆಲ್ ಹಿಂದಿನ ವರ್ಷ ಡಿಸೆಂಬರ್ 29ರಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ 13 ಸ್ಥಾನದಲ್ಲಿದ್ದಾಗ ತಮ್ಮ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದರು.
2008ರಲ್ಲಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅವರು ಮೊದಲ ಪಂದ್ಯವನ್ನು ಮೊಹಾಲಿಯಲ್ಲಿ ಭಾರತದ ವಿರುದ್ಧ ಆಡಿದ್ದರು. ಮೊದಲ ವಿಕೆಟ್ ಸಚಿನ್ ತೆಂಡುಲ್ಕರ್ ಅವರದ್ದಾಗಿತ್ತು. 2010-11ರ ಆ್ಯಶಸ್ ಸರಣಿಯ ವೇಳೆ ತಮ್ಮ ಹುಟ್ಟುಹಬ್ಬದಂದೇ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ ದಾಖಲೆಯೂ ಇವರ ಹೆಸರಿನಲ್ಲಿದೆ. 22 ಏಕದಿನ ಹಾಗೂ ಎರಡು ಟಿ-ಟ್ವೆಂಟಿ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್)ನಲ್ಲಿ ಅಡಿಲೆಡ್ ಸ್ಟ್ರೈಕರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ''ನನಗೂ ವಯಸ್ಸಾಗುತ್ತಿದ್ದು ಎಲ್ಲಿಯವರೆಗೂ ಆಟವಾಡಲು ಸಾಧ್ಯ ಇರುತ್ತದೆಯೋ ಅಲ್ಲಿಯವರೆಗೆ ಆಡುತ್ತೇನೆ, ನಂತರ ತಂಡದಿಂದ ಹೊರಗುಳಿಯುತ್ತೇನೆ'' ಎಂದಿದ್ದಾರೆ.