ಹೈದರಾಬಾದ್: ಕೆಲ ವರ್ಷಗಳ ಹಿಂದಷ್ಟೇ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಪಾಕ್ನ ಮಾಜಿ ಆಲ್ರೌಂಡರ್ ಶೊಯೆಬ್ ಮಲಿಕ್ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಮತ್ತೋರ್ವ ಭಾರತೀಯ ಯುವತಿ ಪಾಕ್ ಕ್ರಿಕೆಟಿಗನ ಕೈ ಹಿಡಿಯಲು ತೀರ್ಮಾನಿಸಿದ್ದಾರೆ.
ಹಸನ್ ಅಲಿ ಜತೆ ಹರಿಯಾಣದ ಮಿವತ್ನ ಶಮಿಯಾ ಅಝ್ರೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ದುಬೈನ ಅಟ್ಲಾಂಟಿಸ್ ಪಾಮ್ ಹೋಟೆಲ್ನಲ್ಲಿ ಆಗಸ್ಟ್ 20ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ. ಶಮಿಯಾ ಮಾನವ್ ರಚನಾ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದುಕೊಂಡಿದ್ದಾರೆ. ಈ ಹಿಂದೆ ಜೆಟ್ ಏರ್ವೇಸ್ನಲ್ಲಿ ಕೆಲಸ ಮಾಡುತ್ತಿದ್ದ ಇವರು ಸದ್ಯ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯಲ್ಲಿ ಫ್ಲೈಟ್ ಎಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ ಹಸನ್ ಅಲಿ ಬರೋಬ್ಬರಿ 84 ರನ್ ಬಿಟ್ಟು ಕೊಟ್ಟು ದುಬಾರಿ ಬೌಲರ್ ಆಗಿದ್ದರು. ಅದಾದ ಬಳಿಕ ಕೆಲ ಪಂದ್ಯಗಳಿಂದ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಪಾಕಿಸ್ತಾನದ ಕ್ರಿಕೆಟರ್ಗಳಾದ ಜಹೀರ್ ಅಬ್ಬಾಸ್, ಮೊಸಿನ್ ಹಸನ್ ಖಾನ್ ಈಗಾಗಲೇ ಭಾರತೀಯ ಮೂಲದ ಯುವತಿಯರನ್ನು ವಿವಾಹವಾಗಿದ್ದಾರೆ.