ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವು ಮೂರು ವಿಕೆಟ್ಗಳ ರೋಚಕ ಜಯ ದಾಖಲಿಸಿದೆ.
ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹರಿಣಗಳನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಬ್ಯಾಟಿಂಗ್ಗೆ ನಡೆಸಿದ ದ. ಆಫ್ರಿಕಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ವಾನ್ ಡೆರ್ ಡಸೆನ್ ಜವಾಬ್ದಾರಿಯುತ ಶತಕದ (123) ಹಾಗೂ ಡೆವಿಡ್ ಮಿಲ್ಲರ್ ಅರ್ಧಶತಕ (50)ದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 273 ರನ್ ಪೇರಿಸಿತು.
ಇನ್ನುಳಿದಂತೆ ಮಾರ್ಕ್ರಂ 19, ಡಿ ಕಾಕ್ 20, ಫೆಹ್ಲುಕ್ವಾಯೋ 29 ಹಾಗೂ ರಬಾಡ 13 ರನ್ ಬಾರಿಸಿ ತಂಡಕ್ಕೆ ನೆರವಾದರು. ಪಾಕ್ ಪರ ಶಾಹೀನ್ ಆಫ್ರಿದಿ ಹಾಗೂ ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು.
274 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ನಾಯಕ ಬಾಬರ್ ಅಜಂ ಶತಕದಾಟದಿಂದ ಮೇಲುಗೈಗೆ ಕಾರಣರಾದರು. ಬಾಬರ್ 104 ಎಸೆತಗಳಲ್ಲಿ 103 ರನ್ ಬಾರಿಸಿದರೆ, ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ 70 ರನ್ ಗಳಿಸಿದರು. ಅಂತಿಮ ಓವರ್ಗಳಲ್ಲಿ ಆಲ್ರೌಂಡರ್ ಶಹಾಬ್ ಖಾನ್ ಅತ್ಯಮೂಲ್ಯ 33 ರನ್ ಗಳಿಸಿ ಪಾಕ್ ಗೆಲುವಿಗೆ ನೆರವಾದರು. ಅಂತಿಮ ಎಸೆತದಲ್ಲಿ ಗುರಿ ತಲುಪುವ ಮೂಲಕ ಪಾಕಿಸ್ತಾನ ರೋಚಕ ಜಯ ಗಳಿಸಿತು.
ಮೂರು ಪಂದ್ಯಗಳ ಸರಣಿಯಲ್ಲಿ ಪಾಕ್ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. 2ನೇ ಏಕದಿನ ಪಂದ್ಯ ಜೋಹಾನ್ಸ್ಬರ್ಗ್ನಲ್ಲಿ ನಾಳೆ ಏ.4ರಂದು ನಡೆಯಲಿದೆ.
ಇದನ್ನೂ ಓದಿ : ಸಿಎಸ್ಕೆ ಕ್ಯಾಂಪ್ನಲ್ಲಿ ಧೋನಿ ಭೇಟಿ ಮಾಡಿದ 'ಸರ್.ಜಡೇಜಾ' ಹೇಳಿದ್ದೇನು?