ಸೆಂಚುರಿಯನ್: ಫಖರ್ ಝಮಾನ್ ಶತಕ ಮತ್ತು ನಾಯಕ ಬಾಬರ್ ಅಜಮ್ರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವನಿಂದ ಪಾಕಿಸ್ತಾನ ತಂಡದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು 28ರನ್ಗಳಿಂದ ಮಣಿಸಿದೆ. ಜೊತೆಗೆ 2-1ರಿಂದ ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 320 ರನ್ಗಳಿಸಿತು. ಆರಂಭಿಕ ಬ್ಯಾಟ್ಸ್ಮನ್ ಫಖರ್ ಝಮಾನ್ 104 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 101 ರನ್, ಬಾಬರ್ ಅಜಮ್ 82 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 94 ರನ್ಗಳಿಸಿದರು. ಇಮಾಮ್ ಉಲ್ ಹಕ್ 57 ಹಾಗೂ ಹಸನ್ ಅಲಿ 11 ಎಸೆತಗಳಲ್ಲಿ ಅಜೇಯ 32 ರನ್ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ 45ಕ್ಕೆ 3, ಐಡೆನ್ ಮ್ಯಾರ್ಕ್ರಮ್ 48ಕ್ಕೆ 2 ವಿಕೆಟ್ , ಸ್ಮಟ್ಸ್ ಮತ್ತು ಪೆಹ್ಲುಕ್ವಾಯೋ ತಲಾ ಒಂದು ವಿಕೆಟ್ ಪಡೆದಿದ್ದರು.
ಇನ್ನು 321ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಆತಿಥೇಯ ತಂಡ 49.3 ಓವರ್ಗಳಲ್ಲಿ 292 ರನ್ಗಳಿಗೆ ಆಲೌಟ್ ಆಗುವ ಮೂಲಕ 28ರನ್ಗಳ ಸೋಲು ಕಂಡಿತು.
ಡಿಕಾಕ್, ಮಿಲ್ಲರ್ರ ಅನುಪಸ್ಥಿತಿಯಲ್ಲಿ ಹರಿಣಗಳ ಪರ ಇನ್ನಿಂಗ್ಸ್ ಆರಂಭಿಸಿದ ಜೆನ್ನೆಮನ್ ಮಲನ್ 81 ಎಸೆತಗಳಲ್ಲಿ 70 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೈಲ್ ಕೈಲ್ ವೆರೆನ್ನೆ(62) ಮತ್ತು ಪೆಹ್ಲುಕ್ವಾಯೋ (54) ಅರ್ಧಶತಕ ಸಿಡಿಸಿ ಗೆಲುವಿಗಾಗಿ ಪ್ರತಿರೋಧ ತೋರಿದರಾದರೂ ಆರಂಭಿಕ ಕ್ರಮಾಂಕದಿಂದ ಬೆಂಬಲ ಸಿಗದ ಕಾರಣ ದಕ್ಷಿಣ ಆಫ್ರಿಕಾ ಸೋಲು ಕಂಡಿತು.
ಪಾಕಿಸ್ತಾನ ಪರ ಶಹೀನ್ ಅಫ್ರಿದಿ ಮತ್ತು ಮೊಹಮ್ಮದ್ ನವಾಜ್ ತಲಾ 3 ವಿಕೆಟ್, ಹ್ಯಾರೀಸ್ ರವೂಫ್ 2, ಹಸನ್ ಅಲಿ ಮತ್ತು ಉಸ್ಮಾನ್ ಖಾದಿರ್ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
94 ರನ್ಗಳಿಸಿ ಬಾಬರ್ ಅಜಮ್ ಪಂದ್ಯ ಶ್ರೇಷ್ಠ ಮತ್ತು ಸತತ 2 ಶತಕ ಸಿಡಿಸಿದ ಫಖರ್ ಝಮಾನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.