ದುಬೈ: ಆರ್ಸಿಬಿ ತಂಡದಲ್ಲಿ ಪದಾರ್ಪಣೆ ಲೀಗ್ನಲ್ಲೇ ಮಿಂಚುತ್ತಿರುವ ಯುವ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಭಾರತೀಯ ಕ್ರಿಕೆಟ್‌ನ ಭವಿಷ್ಯ ಎಂದು ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅತಿ ಹೆಚ್ಚು ರನ್ಗಳಿಸಿದ ಟಾಪ್ 10 ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಆರ್ಸಿಬಿಯಲ್ಲೂ ನಾಯಕ ವಿರಾಟ್ ಕೊಹ್ಲಿ ನಂತರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಯುವ ಬ್ಯಾಟ್ಸ್‌ಮನ್ ಆಟಕ್ಕೆ ಮನಸೋತಿರುವ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಪಡಿಕ್ಕಲ್ ಆಟ ನೋಡಿದರೆ, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ನೆನಪಾಗುತ್ತದೆ ಎಂದಿದ್ದಾರೆ.
"ದೇವದತ್ ನಂಬಲಸಾಧ್ಯವಾದ ಬ್ಯಾಟ್ಸ್‌ಮನ್ ಆಗಿದ್ದಾರೆ. ಆತ ಬ್ಯಾಟಿಂಗ್ ಮಾಡುವ ವಿಧಾನ ಗಮನಿಸಿದರೆ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ಗೆ ಹೋಲುತ್ತದೆ. ದೇವದತ್ ಅವರು ಹೇಡನ್ ರೀತಿಯ ದೇಹದಾರ್ಢ್ಯತೆ ಹೊಂದಿಲ್ಲವಾದರೂ ಅವರು ಚೆಂಡನ್ನು ಹೊಡೆಯುವ ವಿಧಾನದೊಂದಿಗೆ ಇದೇ ರೀತಿಯ ತಂತ್ರವನ್ನು ಹೊಂದಿದ್ದಾರೆ. ಅವರು ಶ್ರೇಷ್ಠ ಕ್ರೀಡಾಪಟು, ಅದು ಮುಖ್ಯವಾಗಿದೆ. ಅವರು ಖಂಡಿತ ಭಾರತೀಯ ಕ್ರಿಕೆಟ್‌ನ ಭವಿಷ್ಯ " ಎಂದು ಮೋರಿಸ್ ತಿಳಿಸಿದ್ದಾರೆ.
ದೇವದತ್ ಪಡಿಕ್ಕಲ್ ಆಡಿರುವ 10 ಪಂದ್ಯಗಳಿಂದ 3 ಅರ್ಧಶತಕದ ಸಹಿತ 321 ರನ್ಗಳಿಸುವ ಮೂಲಕ ಅತಿ ಹೆಚ್ಚು ರನ್ಗಳಿಸಿರುವವರ ಪಟ್ಟಿಯಲ್ಲಿ ಟಾಪ್ 10ರಲ್ಲಿದ್ದಾರೆ.