ಹ್ಯಾಮಿಲ್ಟನ್: ಫೆ.21ರಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಯುವ ಆಟಗಾರ ಶುಬ್ಮನ್ ಗಿಲ್ ಅಥವಾ ಪೃಥ್ವಿ ಶಾ ಆರಂಭಿಕ ಆಟಗಾರರಾಗಿ ಕ್ರೀಸಿಗಿಳಿಯುವ ಸಾಧ್ಯತೆ ಇದೆ.
ಆರಂಭಿಕ ಆಟಗಾರ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದ ಕಾರಣ ಟೀಂ ಇಂಡಿಯ ಹೊಸ ಆಟಗಾರನನ್ನು ಕಣಕ್ಕಿಳಿಸಲು ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಶುಬ್ಮನ್ ಗಿಲ್, ನಮ್ಮಿಬ್ಬರ ವೃತ್ತಿಜೀವನವು ಒಂದೇ ಸಮಯದಲ್ಲಿ ಪ್ರಾರಂಭವಾಯಿತು. ನಾವಿಬ್ಬರೂ ನಮ್ಮ ಸ್ಥಾನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಯಾರನ್ನ ಕಣಕ್ಕಿಳಿಸಬೇಕು ಎಂಬ ನಿರ್ಧಾರ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ಗೆ ಬಿಟ್ಟಿದ್ದು ಎಂದಿದ್ದಾರೆ.
ಆರಂಭಿಕನಾಗಿ ಕಣಕ್ಕಿಳಿಯಬೇಕೆಂಬ ವಿಚಾರ ನನಗೇನೂ ಹೊಸದಲ್ಲ. ಆದ್ರೆ, ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಬೀಸುವುದಕ್ಕೂ, ಆರಂಭಿಕ ಸ್ಥಾನದಲ್ಲಿ ಬ್ಯಾಟ್ ಬೀಸುವುದಕ್ಕೂ ವ್ಯತ್ಯಾಸವಿದೆ. ಆರಂಭಿಕನಾಗಿ ಕಣಕ್ಕಿಳಿದಾಗ ಉತ್ತಮ ಬುನಾದಿ ಹಾಕಬೇಕು, ಇದು ಮುಂದೆ ಬರುವ ಆಟಗಾರರಿಗೆ ಅನುಕೂಲವಾಗಲಿದೆ ಎಂದು ಯುವ ಕ್ರಿಕೆಟಿಗ ಅಭಿಪ್ರಾಯಪಟ್ಟರು.
ಕಳೆದೊಂದು ತಿಂಗಳಿಂದ ಭಾರತ ಎ ತಂಡ ಕಿವೀಸ್ ನೆಲದಲ್ಲಿ ಬೀಡು ಬಿಟ್ಟಿದ್ದು, ನ್ಯೂಜಿಲ್ಯಾಂಡ್ ತಂಡದ ಬಗ್ಗೆ ಕೆಲವು ವಿಷಯಗಳನ್ನ ಕಂಡುಕೊಂಡಿದ್ದೇವೆ. ಕಿವೀಸ್ ಬೌಲರ್ಗಿಳು ಶಾರ್ಟ್ ಬಾಲ್ಗಳಿಂದ ಹೆಚ್ಚು ವಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಎಸೆತಗಳನ್ನು ಟೀಂ ಇಂಡಿಯಾ ಆಟಗಾರರು ಎಚ್ಚರಿಕೆಯಿಂದ ಎದುರಿಸಬೇಕು ಎಂದರು.