ಮುಂಬೈ: ಚೆಂಡಿನ ಹೊಳಪು ಹೆಚ್ಚಿಸಲು ಉಗುಳು ಬಳಕೆ ನಿಷೇಧಿಸುವ ನಿರ್ಧಾರ ಕೇವಲ ತಾತ್ಕಾಲಿಕವಷ್ಟೇ, ಒಮ್ಮೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಾಗ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಐಸಿಸಿ ಕ್ರಿಕೆಟ್ ಸಲಹಾ ಸಮಿತಿ ಮುಖ್ಯಸ್ಥ ಅನಿಲ್ ಕುಂಬ್ಳೆ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಚೆಂಡಿಗೆ ಉಗುಳು ಸವರುವುದನ್ನು ನಿಷೇಧಿಸಲು ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಐಸಿಸಿಗೆ ಶಿಫಾರಸು ಮಾಡಿತ್ತು. ಆದರೆ ಈ ನಿರ್ಧಾರದಿಂದ ಚೆಂಡು ಸ್ವಿಂಗ್ ಪಡೆಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ಕೇಳಿಬಂದಿತ್ತು. ಇನ್ನು ಕೆಲವರು ಕುಂಬ್ಳೆ ಪರ ವಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕುಂಬ್ಳೆ , ಚೆಂಡು ಹೊಳಪು ಬರಲು ಉಗುಳು ಬಳಕೆ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಕೋವಿಡ್ ವೈರಸ್ ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ತಾತ್ಕಾಲಿಕವಾಗಿ ಇದನ್ನು ನಿಷೇಧಿಸಲಾಗಿದೆ. ಇದು ಮಧ್ಯಂತರ ಕ್ರಮವಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದರೆ ಈ ನಿಷೇಧವನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಚೆಂಡಿಗೆ ಹೊಳಪು ತರಲು ವ್ಯಾಕ್ಸ್ನಂತಹ ವಸ್ತುಗಳನ್ನು ಉಪಯೋಗಿಸಲು ಚಿಂತನೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕ್ರಿಕೆಟ್ ಇತಿಹಾಸದ ಕಡೆಗೆ ಹಿಂತುರಿಗಿ ನೋಡಿದರೆ ಚೆಂಡಿನ ಹೊಳಪಿಗೆ ಯಾವುದೇ ಬಾಹ್ಯ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇದರಿಂದ ಹೆಚ್ಚಿನ ಪರಿಣಾಮ ಬೀರಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗರ ಸ್ಯಾಂಡ್ ಪೇಪರ್ ಪ್ರಕರಣವನ್ನು ನೆನೆದಿದ್ದಾರೆ.