ಮುಂಬೈ: ಯುಎಇನಲ್ಲಿ ಆಯೋಜನೆಗೊಂಡಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್ನಲ್ಲಿ ಒಂದೇ ಒಂದು ಕೋವಿಡ್-19 ಪ್ರಕರಣ ಕಂಡು ಬಂದರೂ ಸಂಪೂರ್ಣ ಆವೃತ್ತಿ ರದ್ಧುಗೊಳ್ಳುವ ಸಾಧ್ಯತೆ ಇದ್ದು, ಆ ರೀತಿಯ ಘಟನೆ ನಡೆಯದಂತೆ ಗಮನ ಹರಿಸಬೇಕಾಗಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.
ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಐಪಿಎಲ್ಗೆ ತಯಾರಿ ನಡೆಸುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕ ನೆಸ್ ವಾಡಿಯಾ, ಐಪಿಎಲ್ ಪ್ರಾಯೋಜಕತ್ವದ ಮೇಲಿನ ಊಹಾಪೋಹಗಳ ಬಗ್ಗೆ ಮಾತನಾಡುವುದಕ್ಕಿಂತ, ಟೂರ್ನಿ ವೇಳೆ ಕೋವಿಡ್ ಕೇಸ್ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.
ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಚೀನಾದ ಮೊಬೈಲ್ ತಯಾರಿಕ ಕಂಪನಿ ವಿವೋ ಹಿಂದೆ ಸರಿದಿದ್ದು, ಬಿಸಿಸಿಐ ಅಧಿಕೃತವಾಗಿ ಖಚಿತಪಡಿಸಿದೆ. " ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ವಿವೋ ಕಂಪನಿ ಹಿಂದಕ್ಕೆ ಸರಿಯುತ್ತಿರುವ ಬಗ್ಗೆ ಊಹಾಪೋಹಗಳು ಎದಿದ್ದು, ಇದೊಂದು ಹಾಸ್ಯಾಸ್ಪದ ಅನ್ನಿಸುತ್ತಿದೆ. ಐಪಿಎಲ್ ನಡೆಯುತ್ತದೆ ಎನ್ನುವುದು ನಮಗೆ ಗೊತ್ತಿದೆ. ಐಪಿಎಲ್ನಲ್ಲಿ ತನ್ನ ಭವಿಷ್ಯವನ್ನು ಲೆಕ್ಕಿಸದೆ ಚೀನಾ ಕಂಪನಿ ಒಂದು ವೇಳೆ ಪ್ರಾಯೋಕತ್ವದಿಂದ ಹಿಂದೆ ಸರಿದರೆ ಬೇರೆ ಕಂಪನಿಗಳ ಪ್ರಾಯೋಜಕತ್ವದ ಅಗತ್ಯವಿರುತ್ತದೆ ಎಂದರು.
ಇನ್ನು ಟೈಟಲ್ ಪ್ರಾಯೋಜಕತ್ವದಲ್ಲಿ ಬಿಸಿಸಿಐ ನಿರ್ಧಾರದ ಬಗ್ಗೆ ನಮಗೇನು ತಿಳಿದಿಲ್ಲ. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ಬಿಸಿಸಿಐ ಬೆಂಬಲಕ್ಕೆ ನಿಲ್ಲುತ್ತೇವೆ.ಅದಕ್ಕಾಗಿ ಶೀಘ್ರದಲ್ಲಿ ಮತ್ತೆ ಸಭೆ ನಡೆಸಲಾಗುವುದು ಎಂದರು.
ಇನ್ನು ಐಪಿಎಲ್ ಟೂರ್ನಮೆಂಟ್ ಯಾವುದೇ ಅಡೆ-ತಡೆಗಳಿಲ್ಲದೆ ನಡೆಸಲು ಬಿಸಿಸಿಐ 16 ಪುಟಗಳ ಮಾರ್ಗಸೂಚಿಗಳನ್ನ ಎಲ್ಲ ಪ್ರಾಂಚೈಸಿಗಳಿಗೆ ರವಾನೆ ಮಾಡಿದೆ. ಐಪಿಎಲ್ಗಾಗಿ ಯುಎಇಗೆ ಭೇಟಿ ನೀಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಆದರೆ ಸುರಕ್ಷತೆ ಬಗ್ಗೆ ಯಾವುದೇ ರಾಜಿ ಇಲ್ಲ. ಏಕೆಂದರೆ ಟೂರ್ನಿಯ ವೇಳೆ ಒಂದೇ ಒಂದು ಕೋವಿಡ್-19 ಪ್ರಕರಣ ಕಂಡುಬಂದರೂ ಐಪಿಎಲ್ ರದ್ದಾಗುವ ಸಾಧ್ಯತೆಯಿದೆ. ಅದಕ್ಕಾಗಿ ಇಂತಹ ಘಟನೆ ನಡೆಯದಂತೆ ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.